ಬಳ್ಳಾರಿ: ಕರ್ತವ್ಯನಿರತ ಪತ್ರಕರ್ತರ ಹಿತಾಸಕ್ತಿಗಾಗಿ ಬಳ್ಳಾರಿ ಜಿಲ್ಲಾ ವರದಿಗಾರರ ಒಕ್ಕೂಟವನ್ನು ಭಾನುವಾರ ರಚಿಸಲಾಯಿತು. ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ, ಸಂಘಟನಾ ಕಾರ್ಯದರ್ಶಿ, ಖಜಾಂಚಿ ಹಾಗೂ ಕಾರ್ಯಕಾರಿಣಿ ಸಮಿತಿಯ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿಯನ್ನು ಮತಯಾಚನೆ ಮೂಲಕ ಆಯ್ಕೆ ಮಾಡಲಾಯಿತು. ವರದಿಗಾರ ಬಸವರಾಜ ಹರನಹಳ್ಳಿ ಹಾಗೂ ವರದಿಗಾರ ವೆಂಕೋಬಿ ಸಂಗನಕಲ್ಲು ನಡುವೆ ಸ್ಪರ್ಧೆ ನಡೆಯಿತು.
ನಗರದ ಡಿಸಿ ಕಚೇರಿ ಆವರಣದಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಮತದಾನ ಪ್ರಕ್ರಿಯೆ ಮೂಲಕ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು.
ಜಿಲ್ಲಾ ವರದಿಗಾರ ವೆಂಕೋಬಿ ಸಂಗನಕಲ್ಲು ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಮತ್ತಿಹಳ್ಳಿ ಅಹಿರಾಜ ಘೋಷಣೆ ಮಾಡಿದರು.
ಅವಿರೋಧ ಆಯ್ಕೆ: ಒಕ್ಕೂಟದ ಅಧ್ಯಕ್ಷರಾಗಿ ಪತ್ರಿಕೆಯೊಂದರ ಜಿಲ್ಲಾ ವರದಿಗಾರ ಕೆ.ಎಂ.ಮಂಜುನಾಥ, ಉಪಾಧ್ಯಕ್ಷರಾಗಿ ಖಾಸಗಿ ವಾಹಿನಿಯೊಂದರ ಜಿಲ್ಲಾ ವರದಿಗಾರ ವೆಂಕಟೇಶ ಕುಲಕರ್ಣಿ, ಪತ್ರಿಕೆಯೊಂದರ ಜಿಲ್ಲಾ ವರದಿಗಾರ ನರಸೇಗೌಡ, ಸಂಘಟನಾ ಕಾರ್ಯದರ್ಶಿಗಳಾಗಿ ಟಿವಿ ವರದಿಗಾರ ಸುರೇಶ ಚವ್ಹಾಣ, ವರದಿಗಾರ ವೀರೇಶ ಕಟ್ಟೆಮ್ಯಾಗಳ, ಖಜಾಂಚಿಯಾಗಿ ಪತ್ರಿಕಾ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕಿನ್ನೂರೇಶ್ವರ, ದುರ್ಗೇಶ, ಮಾರುತಿ ಸುಣಗಾರ, ಚಂದ್ರಶೇಖರಗೌಡ, ವೀರನಗೌಡ ಪಾಟೀಲ ಸೇರಿದಂತೆ ಇತರರನ್ನು ಆಯ್ಕೆ ಮಾಡಲಾಯಿತು.