ಬಳ್ಳಾರಿ: ಕೆರೆಯಲ್ಲಿ ಮೀನು ಹಿಡಿಯುವ ಹಕ್ಕು ಕೇವಲ ಮೀನುಗಾರರ ಸಂಘದ ಸದಸ್ಯರಿಗೆ ಮಾತ್ರ ಇರುತ್ತದೆ. ಆದ್ರೆ, ಸದಸ್ಯರಲ್ಲದವರಿಗೆ ಮೀನು ಹಿಡಿಯಲು ಅವಕಾಶ ನೀಡುತ್ತಿದ್ದು, ನಮಗೆ ಮೋಸ ಮಾಡಲಾಗುತ್ತಿದೆ ಎಂದು ಮೀನುಗಾರರ ಸಹಕಾರ ಸಂಘದ ತೆಕ್ಕಲಕೋಟೆಯ ಸದಸ್ಯರು ಆರೋಪಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಸಂಘದ ಸದಸ್ಯ ವಲಿಸಾಬ್, ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆಯ ಮೀನುಗಾರರ ಸಹಕಾರ ಸಂಘ ನಿಯಮಿತದಲ್ಲಿ 25 ರಿಂದ 30 ವರ್ಷದದಿಂದ ಮೀನುಗಾರಿಕೆಯನ್ನು ಅವಲಂಬಿಸಿದ್ದೇವೆ. ಆದ್ರೆ ಸದಸ್ಯರಲ್ಲದವರಿಗೆ ಮೀನು ಹಿಡಿಯಲು ಅವಕಾಶ ನೀಡುತ್ತಿದ್ದು, ನಮಗೆ ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಮೌಲಾ ಸಾಬ್ ಎಂಬ ವ್ಯಕ್ತಿಯು ಸರ್ಕಾರದ ಅನುಮತಿ ಪಡೆದು, ಸಂಘದ ಷೇರು 515 ರೂಪಾಯಿ ತುಂಬಿ ಸದಸ್ಯತ್ವದ ಗುರುತಿನ ಚೀಟಿಯನ್ನು ಪಡೆದಿದ್ದು. ಅವರು ಸಿರಿಗೇರಿ ವ್ಯಾಪ್ತಿಯಲ್ಲಿ ಬರುವ ಮಾಳಾಪುರ ಮತ್ತು ಗುಂಡಿಗನೂರು ಕೆರೆಗಳಲ್ಲಿ 100 ಸದಸ್ಯರೊಂದಿಗೆ ಮೀನು ಹಿಡಿದು ಮಾರಾಟ ಮಾಡುತ್ತಿದ್ದರು. ಆದ್ರೆ ಸರ್ಕಾರದಿಂದ ಮೀನುಗಾರಾದ ನಮಗೆ ಯಾವ ಸೌಲಭ್ಯವೂ ದೊರೆತಿಲ್ಲ. ಅದರಲ್ಲಿ ಆಶ್ರಯ ಮನೆ, ಮೀನಿನ ಬಲೆ, ಬುಟ್ಟಿ ಸಹ ನೀಡಿಲ್ಲವೆಂದು ದೂರಿದರು.
ನಂತರ ಮಾತನಾಡಿದ ಮೀನುಗಾರರ ಸಹಕಾರ ಸಂಘದ ಸದಸ್ಯೆ ಸಿಂದವಾಳ ಕರಿಯಮ್ಮ, ಕಳೆದ 30 ವರ್ಷಗಳಿಂದ ಮೀನು ಹಿಡಿಯುವ ಕೆಲಸ ಮಾಡುತ್ತಿದ್ದೇವೆ. ಆದ್ರೆ ಈಗ ಸದಸ್ಯರಲ್ಲದವರಿಗೆ ಮೀನು ಹಿಡಿಯಲು ನೀಡಿದ್ರೇ ಹೇಗೆ ? ಎಂದು ಪ್ರಶ್ನಿಸಿದರು.
ನಮಗೆ ಒಂದು ಕೆ.ಜಿ ಮೀನು ಹಿಡಿದ್ರೆ 2 ರೂಪಾಯಿ ನೀಡುತ್ತಾರೆ. ಹೆಚ್ಚಿಗೆ ಹಣ ಕೇಳಿದ್ರೆ ಕೊಡಲ್ಲ, ಈಗ ಕೆಲಸ ಇಲ್ಲವೆಂದು ಸದಸ್ಯರಲ್ಲದವರಿಗೆ ಮೀನು ಹಿಡಿಯಲು ಅನುಕೂಲ ಮಾಡಿಕೊಟ್ಟರೇ ಹೇಗೆ?. ಜೀವನ ನಡೆಸೋದು ಕಷ್ಟ ಇದೆ. ನಮಗೆ ಮಕ್ಕಳು-ಮರಿ ಇದ್ದಾರೆ. ಈಗ ಯಾರಾದ್ರೂ ಕೂಲಿ ಕರೆದರೆ ಹೋಗುತ್ತೇವೆ. ಇಲ್ಲದಿದ್ದರೆ ಮನೆಯಲ್ಲಿಯೇ ಇರುತ್ತೇವೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಮೌಖಿಕವಾಗಿ ಮೀನುಗಾರಿಕಾ ಇಲಾಖೆ ಬಳ್ಳಾರಿಯ ಸಹಾಯಕ ನಿರ್ದೇಶಕ ಶಿವಣ್ಣ ಅವರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಹಾಗಾಗಿ ಇಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಸಂಘವನ್ನು ರದ್ದುಗೊಳಿಸಿವಂತೆ ಮನವಿ ಮಾಡಿದರು.