ಬಳ್ಳಾರಿ: ನಾವಿಲ್ಲಿ ಬಂದಿರುವುದು ಕೂಗಾಡುವುದಕ್ಕೆ ಅಲ್ಲ. ಸುಮ್ಮನೆ ಕೂಗಾಡಿದ್ರೆ ಏನೂ ಪ್ರಯೋಜನವಿಲ್ಲ. ನೀವು ಎತ್ತಿರೋ ಸಮಸ್ಯೆ ಸ್ಥಳೀಯವಾಗಿವೆ. ಅದನ್ನು ನಾವು ಬಗೆಹರಿಸುತ್ತೇವೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಸಿಪಿಎಂ ಮುಖಂಡನ ಶಿವಶಂಕರ್ ಅವರಿಗೆ ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಅವರೊಂದಿಗೆ ಜಿಲ್ಲಾ ರೈತ ಮುಖಂಡರ ಸಲಹೆ, ಸೂಚನೆ ಹಾಗೂ ಅಭಿಪ್ರಾಯ ಸಂಗ್ರಹಿಸುವ ಸಭೆಯಲ್ಲಿ ಸಿಪಿಎಂ ಮುಖಂಡ ವಿ.ಎಸ್.ಶಿವಶಂಕರ್ ಹಾಗೂ ಡಿಸಿ ನಕುಲ್ ನಡುವೆ ಮಾತಿನ ಚಕಮಕಿ ನಡೆಯಿತು.
ಎಪಿಎಂಸಿ ಮಾರುಕಟ್ಟೆಯಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿಲ್ಲ. ಹೊರ-ಒಳ ಹೋಗುವ ದಾಸ್ತಾನನ್ನು ತೂಕ ಮಾಡಲು ವ್ಹೇ ಬ್ರಿಡ್ಜ್ ವ್ಯವಸ್ಥೆ ಮಾಡಿಲ್ಲ ಎಂಬ ಸಣ್ಣಪುಟ್ಟ ಸಮಸ್ಯೆಗಳ ಕುರಿತು ಹೇಳಿದಾಗ, ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಕೆ.ಮೋಹನ್ ಉತ್ತರ ನೀಡಲು ಮುಂದಾದರು. ಸಿಸಿಟಿವಿ ಕ್ಯಾಮರಾಗಳ ಅಳವಡಿಕೆಗೆ ಟೆಂಡರ್ ಪ್ರಕ್ರಿಯೆ ನಡೆದಿದೆ ಎಂದರು.
ವ್ಹೇ ಬ್ರಿಡ್ಜ್ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಕುರಿತು ಹೇಳುವ ಮುನ್ನವೇ ಮಧ್ಯಪ್ರವೇಶಿಸಿದ ಸಿಪಿಎಂ ಮುಖಂಡ ಶಿವಶಂಕರ, ಏರು ಧ್ವನಿಯಲ್ಲೇ ಮಾತಾಡಲು ಆರಂಭಿಸಿದಾಗ ಅದಕ್ಕೆ ಸಿಡಿಮಿಡಿಗೊಂಡ ಡಿಸಿ ನಕುಲ್, ನಾವಿಲ್ಲಿ ಬಂದಿರುವುದು ಕೂಗಾಡಲಿಕ್ಕಲ್ಲ. ನನಗೂ ಕೂಗಾಡಲಿಕ್ಕೆ ಬರುತ್ತೆ. ಕೃಷಿ ಬೆಲೆ ಆಯೋಗದ ಅಧ್ಯಕ್ಷರು ಬಂದಿದ್ದಾರೆ. ಅವರ ಬಳಿ ಚರ್ಚಿಸೋಣ ಎಂದರು.
ನಮ್ಮಲ್ಲಿ ಒಂದು ವಾಡಿಕೆ ಇದೆ. ರುದ್ರಭೂಮಿಗೆ ಹೋದ ಹೆಣ, ಎಪಿಎಂಸಿ ಮಾರುಕಟ್ಟೆಗೆ ಹೋದ ರೈತನ ದಾಸ್ತಾನು ವಾಪಾಸ್ ಬರೋದಿಲ್ಲ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದ್ರು.
ರೈತನ ಮನೆ ಬಾಗಿಲಿಗೆ ಮಾರುಕಟ್ಟೆ: ಮಾರುಕಟ್ಟೆ ಬಾಗಿಲಿಗೆ ರೈತನ ಬೆಳೆಗಳ ದಾಸ್ತಾನು ಎಂಬಂತಿತ್ತು. ಆದರೆ, ಇನ್ಮುಂದೆ ಅದು ಬದಲಾಗಲಿದೆ. ರೈತನ ಮನೆ ಬಾಗಿಲಿಗೆ ಮಾರುಕಟ್ಟೆ ಎಂಬಂತಾಗಲಿದೆ. ಇದು ನಮ್ಮ ಗುರಿಯಾಗಿದೆ. ರೈತನ ಮನೆ ಬಾಗಿಲಿಗೆ ಮಾರುಕಟ್ಟೆ ಹೋದ್ರೂ ಎಪಿಎಂಸಿ ಮಾರುಕಟ್ಟೆಯ ಕಣ್ಗಾವಲಿನಲ್ಲೇ ವ್ಯವಹಾರ ನಡೆಯಲಿದೆ. ಅದರಲ್ಲಿ ಯಾರಾದರು ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಾಗುವುದು ಎಂದರು.