ಬಳ್ಳಾರಿ: ಅನೇಕ ವರ್ಷಗಳಿಂದ ಬಾಕಿ ಉಳಿದಿರುವ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸುವುದನ್ನು ಬಿಟ್ಟು ಸಬೂಬು ಹೇಳುವ, ಕಾರಣ ನೀಡುವ ಕೆಲಸ ಮಾಡಬೇಡಿ. ವಹಿಸಿರುವ ಜವಾಬ್ದಾರಿಯನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಿ ಮತ್ತು ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜ.20 ರಂದು ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಪ್ರಾದೇಶಿಕ ಆಯುಕ್ತರುಗಳ, ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಣಾಧಿಕಾರಿಗಳ ಸಮ್ಮೇಳನ ಸಭೆಯ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಮಾಹಿತಿ ಸಭೆಯ ಅಧ್ಯಕ್ಷತೆ ವಹಿಸಿ ಡಿಸಿ ಮಾತನಾಡಿದರು. ವಿವಿಧ ಇಲಾಖೆಗಳ ಬಾಕಿ ಕಾಮಗಾರಿಗಳ ಮಾಹಿತಿ ಪಡೆಯುವ ಜೊತೆಗೆ ಶೀಘ್ರದಲ್ಲೇ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸೂಚಿಸಿದರು.

ಪ್ರವಾಹ, ಮಳೆಯಿಂದ ಉಂಟಾದ ಹಾನಿ ಕುರಿತು ಮಾಹಿತಿ ಪಡೆದರು. ಜಿಲ್ಲೆಯ 32 ಗ್ರಾಮಗಳು ನದಿ ದಡದಲ್ಲಿದ್ದು, 2020ರಲ್ಲಿ ಯಾವುದೇ ಮನೆಗಳು ಪ್ರವಾಹಕ್ಕೆ ತುತ್ತಾಗಿಲ್ಲ. ಅದಕ್ಕೂ ಮುನ್ನ, ಜಿಲ್ಲೆಯಾದ್ಯಂತ 8 ಜನರು ಪ್ರವಾಹ ಮತ್ತು ಭಾರಿ ಮಳೆಯಿಂದಾಗಿ ಜೀವ ಕಳೆದುಕೊಂಡಿದ್ದು, ಒಬ್ಬರಿಗೆ ಐದು ಲಕ್ಷದಂತೆ 40 ಲಕ್ಷ ಪರಿಹಾರ ನೀಡಲಾಗಿದೆ. 16 ಜಾನುವಾರುಗಳು, 59 ಕುರಿ ಮತ್ತು ಮೇಕೆಗಳು ಮೃತಪಟ್ಟಿದ್ದು, 6 ಲಕ್ಷದ 23 ಸಾವಿರ ರೂ. ಪರಿಹಾರ ನೀಡಲಾಗಿದೆ. 103,847 ಹೆಕ್ಟೇರ್ ಬೆಳೆ ಹಾನಿಯಾಗಿದ್ದು, 6,766 ಫಲಾನುಭವಿಗಳಿಗೆ 4 ಕೋಟಿ 56 ಲಕ್ಷದ 81 ಸಾವಿರ ರೂ. ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಸಭೆಯಲ್ಲಿ ವಿವರಿಸಿದರು.
ಈ ಸುದ್ದಿಯನ್ನೂ ಓದಿ: ಕೆಎಸ್‍ಓಯು ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಮೂರು ದಿನದ ಪರಿಚಯ ಕಾರ್ಯಕ್ರಮ
ಸ್ವಚ್ಚ ಭಾರತ್ ಮಿಷನ್ ಆಡಿಯಲ್ಲಿ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಿಕೊಡಲಾಗುತ್ತದೆ. ಬಳ್ಳಾರಿ ನಗರದಲ್ಲಿ 2019ರಲ್ಲಿ 35,284 ಶೌಚಾಲಯಗಳನ್ನು ನಿಮಾಣ ಮಾಡಲಾಗಿದೆ. ಈ ಯೋಜನೆಯಡಿಯಲ್ಲಿ ಪ್ರಸಕ್ತ ಸಾಲಿನಲ್ಲಿ 210 ಗ್ರಾ.ಪಂ. ಕ್ರಿಯಾ ಯೋಜನೆಯು ಸರ್ಕಾರದಿಂದ ಮಾನ್ಯತೆ ಪಡೆದಿದ್ದು, ಅವುಗಳಲ್ಲಿ 102 ಗ್ರಾ.ಪಂ.ಗಳ ಘಟಕ ನಿರ್ಮಾಣ ಮಾಡಲು ಕ್ರಮವಹಿಸಲಾಗಿದೆ. 122 ಗ್ರಾ.ಪಂ.ಗಳಲ್ಲಿ ವಾಹನ ಖರೀದಿ ಮಾಡಲಾಗಿದೆ. 102 ಗ್ರಾ.ಪಂ.ಗಳಲ್ಲಿ ಕಸದ ಬುಟ್ಟಿಗಳನ್ನು ನೀಡಿದ್ದು, 20 ಗ್ರಾ.ಪಂ.ಗಳಿಗೆ ಟೆಂಡರ್ ಕರೆಯಲಾಗಿದೆ. 96 ಗ್ರಾ.ಪಂ.ಗಳಲ್ಲಿ ಕಸ ಸಂಗ್ರಹಣೆಯನ್ನು ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಅಮೃತ್ ಯೋಜನೆಯಡಿಯಲ್ಲಿ ನೀರು ಸರಬರಾಜು, ಒಳಚರಂಡಿ, ಉದ್ಯಾನವನ ನಿರ್ಮಾಣದಂತಹ ಹಲವು ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಆದಷ್ಟು ಬೇಗ ಅವುಗಳನ್ನು ಪೂರ್ಣಗೊಳಿಸಲಾಗುವುದು. ನಗರದಲ್ಲಿ ಎಲ್ಲಾ ಕಡೆ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಅದು ಪೂರ್ಣಗೊಳ್ಳುವ ಹಂತದಲ್ಲಿದೆ ಎಂದು ಅಧಿಕಾರಿಗಳು ವಿವರಿಸಿದರು. ನಗರೋತ್ಥಾನದಲ್ಲಿ ಇದುವರೆಗೆ 14 ಕಾಮಗಾರಿಗಳು ಮಂಜೂರಾಗಿದ್ದು, 7 ಕಾಮಗಾರಿಗಳು ಪೂರ್ಣಗೊಂಡಿವೆ. 4 ಕಾಮಗಾರಿಗಳು ಪ್ರಗತಿಯಲ್ಲಿದ್ದು, 3 ಕಾಮಗಾರಿಗಳು ಟೆಂಡರ್ ಹಂತದಲ್ಲಿವೆ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡರು.