ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸೀಕೆರೆ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಒಬ್ಬರಲ್ಲಿ ಸೋಂಕು ಕಂಡುಬಂದಿದೆ. ಅವರು ನಿನ್ನೆ ಉಚ್ಚಂಗಿದುರ್ಗ ಸರ್ಕಾರಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯ ಬಂದೋಬಸ್ತ್ ಡ್ಯೂಟಿ ಮಾಡಿದ್ದು, ಇದರಿಂದ ವಿದ್ಯಾರ್ಥಿಗಳಲ್ಲಿ ಮತ್ತಷ್ಟು ಆತಂಕ ಹೆಚ್ಚಿದೆ.
ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಯಲ್ಲಿನ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯ ನಿರ್ವಹಿಸಿದ, ಕಾನ್ಸ್ಟೇಬಲ್ ಗಂಟಲು ದ್ರವ್ಯವನ್ನ ಸಂಗ್ರಹಿಸಿ ಕೋವಿಡ್ ಟೆಸ್ಟ್ಗೆ ಕಳುಹಿಸಿಕೊಡಲಾಗಿತ್ತು. ವರದಿ ಬರೋದು ತಡವಾಗಿದ್ದರಿಂದ ಅವರಿಗೆ ನೇರವಾಗಿ ಹರಪನಹಳ್ಳಿ ತಾಲೂಕಿನ ಅರಸೀಕೆರೆಯ ಪೊಲೀಸ್ ಠಾಣೆಗೆ ತೆರಳಿ, ಡ್ಯೂಟಿ ರಿಪೋರ್ಟ್ ಮಾಡಿಕೊಳ್ಳುವಂತೆ ಜಿಲ್ಲಾ ಪೊಲೀಸ್ ಇಲಾಖೆಯು ಸೂಚಿಸಿದೆ. ಅಲ್ಲಿಂದ ಅವರನ್ನ ಉಚ್ಚಂಗಿ ದುರ್ಗದ ಉತ್ಸವಾಂಬ ಪ್ರೌಢಶಾಲೆಯಲ್ಲಿ ನಿನ್ನೆಯ ದಿನದ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಬಂದೋಬಸ್ತ್ಗೆ ಕಳಿಸಲಾಗಿತ್ತು.
ಹೀಗಾಗಿ, ಅರಸೀಕೆರೆಯ ಪೊಲೀಸ್ ಠಾಣೆ ಹಾಗೂ ಉಚ್ಚಂಗಿ ದುರ್ಗ ಗ್ರಾಮದ ಉತ್ಸವಾಂಬ ಪ್ರೌಢಶಾಲೆಯನ್ನ ಸಂಪೂರ್ಣವಾಗಿ ಸೀಲ್ಡೌನ್ ಮಾಡಲಾಗಿದೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯ ನಾನಾ ಗ್ರಾಮಗಳಿಗೆ ಇವರು ಬೀಟ್ ಸಹ ಹೋಗಿದ್ದರು. ತೋರಣಗಲ್ಲಿಂದ ಜೂ. 22ರಂದು ಅರಸಿಕೇರಿಗೆ ಬಂದಿದ್ದಾರೆ. 23ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿದೆ. 24ರಂದು ಪೋತಲಕಟ್ಟಿ, ಚಿಕ್ಕಮೇಗಳಗೇರಿ, ಗುಳೇದಹಟ್ಟಿ, ಗ್ರಾಮಗಳಲ್ಲಿ ಗ್ರಾಮ ಗಸ್ತು (ಬೀಟ್ ) ಡ್ಯೂಟಿ ಮಾಡಿ ಮರಳಿ ವಾಪಸ್ ಅರಸಿಕೇರೆಯ ತಮ್ಮ ಕ್ವಾಟರ್ಸ್‌ಗೆ ಮರಳಿದ್ದಾರೆ. ಜೂ.25ರಂದು ಉಚ್ಚಂಗಿದುರ್ಗ ಗ್ರಾಮದ ಉತ್ಸವಾಂಬ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಡ್ಯೂಟಿ ಮಾಡಿದ್ದಾರೆ. ಅರಸಿಕೇರಿಯ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ಬೀಟ್ ಪುಸ್ತಕ ತೆಗೆದುಕೊಂಡು ಹೋಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ತೋರಣಗಲ್ ಕಂಟೈನ್ಮೆಂಟ್ ಝೋನ್ನಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸ್ ಪೇದೆಗೆ ಪಾಸಿಟಿವ್ ಬಂದಿರೋದು ಖಚಿತವಾಗಿದೆ. ಆದರೆ, ಪರೀಕ್ಷೆಗೆ ಮುನ್ನ ಅವರಿಗೆ ಯಾವುದೇ ಸೋಂಕಿನ ಲಕ್ಷಣಗಳು ಇರಲಿಲ್ಲ ಎಂದು ಎಸ್ಪಿ ಸಿ.ಕೆ.ಬಾಬಾ ತಿಳಿಸಿದ್ದಾರೆ.