ಬಳ್ಳಾರಿ: ನಾನು ಒಂದು ನೂರು ರೂಪಾಯಿಯನ್ನ ಹಳ್ಳಿಗೆ ಕಳುಹಿಸಿದ್ರೆ 15 ರೂಪಾಯಿ ಮಾತ್ರ ತಲುಪುತ್ತದೆ ಎಂದು ರಾಹುಲ್ ಗಾಂಧಿ ಅವರ ತಂದೆ ರಾಜೀವ್ ಗಾಂಧಿ ಅಂದು ಪ್ರಧಾನಿಯಾಗಿದ್ದಾಗ ಹೇಳಿದ್ದರು. ಹಾಗಿದ್ದರೆ, ಕಾಂಗ್ರೆಸ್‌ನವರದ್ದು 85 ಪರ್ಸೆಂಟ್ ಸರ್ಕಾರ ಎಂದು ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪದಲ್ಲಿ ಗುರುವಾರ ಸಂಜೆ ಆಯೋಜಿಸಲಾಗಿದ್ದ ಬಿಜೆಪಿ ಜನ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರ ತಂದೆ ಇವರೆಲ್ಲರಿಗಿಂತ ಒಳ್ಳೆಯವರು, ರಾಜೀವ್ ಗಾಂಧಿ ಅವರು 85 ರೂ.ಗಳು ಜನರಿಗೆ ತಲುಪುವುದಿಲ್ಲ ಅಂತ ಹೇಳಿದ್ದರು. ಅಂದ್ರೆ, 85 ರೂಪಾಯಿಗಳನ್ನು ಕೊಳ್ಳೆ ಹೊಡೆಯಲಾಗ್ತಿತ್ತು. ಈಗ ಹೇಳಿ ಕಾಂಗ್ರೆಸ್ ಎಷ್ಟು ಪರ್ಸೆಂಟ್ ಸರ್ಕಾರ?, 85 ಪರ್ಸೆಂಟ್ ಸರ್ಕಾರ, ಇದನ್ನ ಸ್ವತಃ ರಾಜಿವ್ ಗಾಂಧಿ ಅವರೇ ಹೇಳಿದ್ದರು, ನಾನು ಹೇಳುತ್ತಿಲ್ಲ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಬ್ರಿಟಿಷರ ಸಂತತಿ: ಸಿಎಂ ಬಸವರಾಜ ಬೊಮ್ಮಾಯಿ
ಈಗ ಪ್ರಧಾನಿ ಮೋದಿ ಅವರು ಎಲ್ಲಾ ಯೊಜನೆಗಳ ಹಣವನ್ನು ರೈತರ ಅಕೌಂಟ್‌ಗೆ ಹಾಕ್ತಾ ಇದ್ದಾರೆ. 85 ಪರ್ಸೆಂಟ್ ಭ್ರಷ್ಟಾಚಾರ ಮಾಡಿದ ಇವರು, ನಮಗೆ ಭ್ರಷ್ಟಾಚಾರದ ಬಗ್ಗೆ ಕೇಳ್ತಾರೆ. ಇವರು (ಕಾಂಗ್ರೆಸ್) ಭೂಮಿ, ಆಕಾಶ, ಪಾತಾಳದಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಆಕಾಶದಲ್ಲಿ (2 ಜಿ ಹಗರಣ), ಪಾತಾಳದಲ್ಲಿ (ಕೋಲ್ ಹಗರಣ), ಭೂಮಿಯಲ್ಲಿ (ಭೂ ಕಬಳಿಕೆ) ಭ್ರಷ್ಟಾಚಾರ ಮಾಡಿದ ಇಂತವರು ನಮಗೆ ಭ್ರಷ್ಟಾಚಾರದ ಬಗ್ಗೆ ಕೇಳ್ತಾರೆ ಎಂದು ವ್ಯಂಗ್ಯವಾಡಿದರು.
ಬಸವಣ್ಣನವರಿಗೆ ಅಪಚಾರ: ಕಾಂಗ್ರೆಸ್‌ನವರು ಧರ್ಮ ಒಡೆಯುವ ಕೆಲಸ ಮಾಡುತ್ತಾರೆ, ಬಸವಣ್ಣನವರಿಗೆ ಅಪಚಾರ ಮಾಡಿ ಧರ್ಮ ಒಡೆಯುವ ಕೆಲಸ ಮಾಡಿದ್ದರು. ಅಂದು ಅಧಿಕಾರಕ್ಕಾಗಿ ದೇಶ ಒಡೆದರು. ಮಹಾತ್ಮ ಗಾಂಧಿ ಕಾಂಗ್ರೆಸ್ ವಿಸರ್ಜನೆ ಮಾಡ್ರಿ ಅಂದ್ರೆ ಅಂದು ಅವರ ಮಾತು ಕೇಳಲಿಲ್ಲ. ಈಗ ರಾಹುಲ್ ಗಾಂಧಿ ಕಾಂಗ್ರೆಸ್ ವಿಸರ್ಜನೆ ಮಾಡ್ತಿದ್ದಾರೆ ಎಂದು ಲೇವಡಿ ಮಾಡಿದರು. ಕೋವಿಡ್, ಪ್ರವಾಹದಂತಹ ಸಮಸ್ಯೆ ಇಲ್ಲದಿದ್ದರೂ ಒಂದು ಲಕ್ಷದ 24 ಸಾವಿರ ಕೋಟಿ ಸಾಲ ಮಾಡಿದ್ದರು. ನಾನು ಮತ್ತು ಯಡಿಯೂರಪ್ಪನವರು ಸಿಎಂ ಆಗಿರುವಾಗ ಆರ್ಥಿಕ ಶಿಸ್ತು ಕಾಪಾಡಿದ್ದೇವೆ. ಯಡಿಯೂರಪ್ಪನವರು ಅನೇಕ ಯೋಜನೆಗಳನ್ನು ಕೊಟ್ಟರು. ಕಾಂಗ್ರೆಸ್ ಬಂದಾಗ ಯಾವ ಭಾಗ್ಯಗಳೂ ಬರಲಿಲ್ಲ, ಎಲ್ಲ ದೌರ್ಭಾಗ್ಯಗಳು ಬರುತ್ತವೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಅಸ್ತಿತ್ವ ಉಳಿಸಿಕೊಳ್ಳಲು ರಾಹುಲ್ ಗಾಂಧಿ ಜೋಡೋ ಯಾತ್ರೆ.. ಸಿಎಂ ಬೊಮ್ಮಾಯಿ ಲೇವಡಿ
ಬಳ್ಳಾರಿ ಜಿಲ್ಲೆಯಲ್ಲಿ ಈ ಬಾರಿ ರೊಟ್ಟಿ ತಿರುಗಿ ಬೀಳ್ತದೆ, ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ. ನಾವು ಮೀಸಲಾತಿ ಹೆಚ್ಚಳ ಮಾಡಿದ್ದೇವೆ, ಕಾಂಗ್ರೆಸ್‌ನವರು ಏನು ಮಾಡಿದರು?. ದೀನ ದಲಿತರ ಮನೆಗೆ ಹೋದಾಗ ಅವರ ಮನೆಯ ಕಷ್ಟಗಳನ್ನು ನೋಡಿದ್ದೇವೆ, ಅವರಿಗೆ ಅನುಕೂಲ ಆಗಲಿ ಅಂತ ವಿದ್ಯಾಭ್ಯಾಸ, ಉದ್ಯೋಗ ಕೊಡಲು ನಾವು ಮೀಸಲಾತಿ ಕೊಡುತ್ತಿದ್ದೇವೆ ಎಂದರು.
ಬಿಎಸ್ವೈ ವಾಗ್ದಾಳಿ: ಸಿರುಗುಪ್ಪ ಜನ ಸಂಕಲ್ಪ ಯಾತ್ರೆಯಲ್ಲಿ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಬಿಎಸ್ವೈ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಭ್ರಷ್ಟಾಚಾರದ ಜನನಿ. ಭ್ರಷ್ಟಾಚಾರ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಲಕ್ಷ ಲಕ್ಷ ಕೋಟಿ ಹಗರಣ ಮಾಡಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಗೆಲುವಿನ ಹುಚ್ಚು ಕನಸು ಕೈಬಿಡಿ: ಸಚಿವ ಹಾಲಪ್ಪ ಆಚಾರ್ ವ್ಯಂಗ್ಯ
ಕಾಂಗ್ರೆಸ್ ಮೂರು ತಲೆಮಾರಿಗೆ ಆಗುವಷ್ಟು ಆಸ್ತಿ ಮಾಡಿದೆ ಅಂತಾ ರಮೇಶ್ ಕುಮಾರ್ ಹೇಳಿದ್ದಾರೆ. ಕಳೆದ 5O ವರ್ಷಗಳಲ್ಲಿ ಕಾಂಗ್ರೆಸ್ ಹಗಲು ದರೋಡೆ ಮಾಡಿದೆ ಎಂದು ಟೀಕಿಸಿದರು. ಸೋನಿಯಾ ಗಾಂಧಿ ಬಳ್ಳಾರಿಯಿಂದ ಗೆದ್ದು ದ್ರೋಹ ಮಾಡಿದ್ರು. ಯಾವ ಮುಖ ಇಟ್ಟುಕೊಂಡು ರಾಹುಲ್ ಗಾಂಧಿ ಬಳ್ಳಾರಿಗೆ ಬರುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಸಿಎಂ ಆಗಬೇಕೆಂದು ತಿರುಕನ ಕನಸು ಕಾಣುತ್ತಿದ್ದಾರೆ. ಆ ಕನಸು ನನಸಾಗಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ಮಾಡಿದರು. ಈ ವೇಳೆ ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಸಂಸದ ಸಂಗಣ್ಣ ಕರಡಿ, ಶಾಸಕ ಎಂ.ಎಸ್.ಸೋಮಲಿಂಗಪ್ಪ, ಜಿ.ಸೋಮಶೇಖರರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರಾರಿಗೌಡ ಸೇರಿದಂತೆ ಹಲವರು ಹಾಜರಿದ್ದರು.