ಬೆಳಗಾವಿ: ಇಂದು ಸುರಿದ ಭಾರಿ ಮಳೆಯಿಂದ ಬೈಲಹೊಂಗಲ ಮತ್ತು ಮುನವಳ್ಳಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯ ಯಕ್ಕುಂಡಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು, ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಬೈಲಹೊಂಗಲ ಸುತ್ತಮುತ್ತಲಿನ ಪ್ರದೇಶದಲ್ಲಿ ಇಂದು ಸಂಜೆ ಧಾರಾಕಾರ ಮಳೆಯಾಗಿತ್ತು. ಪರಿಣಾಮ ಬೈಲಹೊಂಗಲದಿಂದ ಹೊಸೂರ ಮಾರ್ಗವಾಗಿ ಮುನವಳ್ಳಿ, ಶ್ರೀಕ್ಷೇತ್ರ ಸೋಗಲ, ಮಲ್ಲೂರ, ಯಕ್ಕುಂಡಿ, ಬಡ್ಲಿ, ಮಾಟೋಳ್ಳಿ, ದೂಪದಾಳ, ಕಾರ್ಲಕಟ್ಟಿ, ವೆಂಕಟೇಶನಗರಗಳಿಗೆ ತೆರಳುವ ಹೊಸೂರ ಗ್ರಾಮದ ದೊಡ್ಡ ಹಳ್ಳದ ಸೇತುವೆ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿ ಹೋಗಿದೆ.
ಇದರಿಂದ ನೂರಾರು ಪ್ರಯಾಣಿಕರು ಪರ್ಯಾಯ ಮಾರ್ಗಗಳಿಲ್ಲದೇ ತಮ್ಮ ಗ್ರಾಮಗಳಿಗೂ ತೆರಳದೇ ಸೇತುವೆ ದಡದಲ್ಲಿ ಬೀಡುಬಿಟ್ಟಿದ್ದರು. ಮಳೆ ಅವಾಂತರದಿಂದ ಪ್ರತಿವರ್ಷ ಈ ಸಮಸ್ಯೆ ಉಂಟಾಗುತ್ತದೆ. ಸೇತುವೆ ಮುಳುಗಡೆಯಿಂದ ಹತ್ತಾರು ಹಳ್ಳಿಗಳಿಗೆ ಹೋಗಬೇಕಾದ ಪ್ರಯಾಣಿಕರು ನಡು ರಸ್ತೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವವರೆಗೆ ಸೇತುವೆ ಪಕ್ಕದಲ್ಲಿ ಕಾಲಕಳೆಯುವಂತಾಗಿತ್ತು.
ಈಗಲಾದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನ ಹರಿಸಿ ಸೇತುವೆ ಎತ್ತರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಓದಿ: ಸಮಾಜದಲ್ಲಿ ಇಂಥದ್ದೆಲ್ಲ ನಡೆಯುತ್ತೆ... ಉತ್ತರ ಕೊಡುವುದಕ್ಕೆ ಗೃಹ ಸಚಿವರಿದ್ದಾರೆ: ಕತ್ತಿ ವಿವಾದಾತ್ಮಕ ಹೇಳಿಕೆ