ಬೆಳಗಾವಿ: ವೈದ್ಯಕೀಯ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ಮಾಡುವ ನಿಟ್ಟಿನಲ್ಲಿ ಬಾರ್ ಕೋಡಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳಲು 15 ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ನ್ಯಾಯಮೂರ್ತಿ ಸುಭಾಷ್ ಅಡಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಒಪ್ಪಿಗೆಯ ಮೇರೆಗೆ ಕ್ಲಿನಿಕ್ಗಳಿಗೆ ಅನುಮತಿ ನೀಡಬೇಕು ಮತ್ತು ವೈದ್ಯಕೀಯ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಕಸ ವಿಲೇವಾರಿ ಖರ್ಚು ಕಡಿಮೆ ಮಾಡಲು ವಾರ್ಡ್ವಾರು ಮೈಕ್ರೋ ಯೋಜನೆ ರೂಪಿಸಬೇಕು. ಸ್ಥಳ ಗುರುತಿಸಿ, ಸ್ಥಳೀಯವಾಗಿಯೇ ಹಸಿ ಕಸವನ್ನು ಅಲ್ಲೇ ಕಾಂಪೋಸ್ಟ್ ಮಾಡಬೇಕು. ಅದೇ ರೀತಿ ವಿಶ್ವವಿದ್ಯಾಲಯ, ಆಸ್ಪತ್ರೆಗಳಲ್ಲಿ ಸಂಗ್ರಹವಾಗುವ ದೊಡ್ಡ ಪ್ರಮಾಣದ ಕಸವನ್ನು ಆಯಾ ಸಂಸ್ಥೆಗಳ ಆವರಣದಲ್ಲಿಯೇ ವಿಲೇವಾರಿ ಮಾಡಲು ಅನುಕೂಲವಾಗುವಂತೆ ಅಲ್ಲಿಯೇ ಘಟಕಗಳನ್ನು ಸ್ಥಾಪಿಸಲು ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ರು.
ಪಿಒಪಿ ಗಣೇಶನ ಕುರಿತು ಜನ ಜಾಗೃತಿ:
ಪಿಒಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಲು ಜನರೇ ಜಾಗೃತರಾಗಿದ್ದು, ಬೆಂಗಳೂರಿನಲ್ಲಿ ದೊಡ್ಡ ಯಶಸ್ಸು ದೊರೆತಿದೆ. ಇದೇ ರೀತಿ ಇತರ ಕಡೆಗಳಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಎಂದರು. ಕಸ ವಿಲೇವಾರಿ, ಪಿಒಪಿ ಗಣೇಶ ನಿಷೇಧ ಸೇರಿದಂತೆ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಮುಖ್ಯವಾಗಿದೆ ಎಂದು ನ್ಯಾಯಮೂರ್ತಿ ಅಡಿ ತಿಳಿಸಿದ್ರು.