ಬೆಳಗಾವಿ: ಕಳೆದೆರಡು ವರ್ಷಗಳಿಂದ ಕೊರೊನಾ ಕಾರಣದಿಂದ ವಡಗಾವಿಯ ಆರಾಧ್ಯ ದೇವತೆ ಶ್ರೀ ಮಂಗಾಯಿದೇವಿ ಜಾತ್ರೆಯು ಭಕ್ತರಿಲ್ಲದೆ ಸರಳವಾಗಿ ನಡೆದಿತ್ತು. ಆದರೆ, ಈ ವರ್ಷ ಸಂಪ್ರದಾಯದಂತೆ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ನೀಡಲಾಗಿದೆ.
ಜಾತ್ರಾ ಮಹೋತ್ಸವಕ್ಕೆ ಸ್ಥಳೀಯರಷ್ಟೇ ಅಲ್ಲದೇ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಪ್ರತಿವರ್ಷವೂ ಆಷಾಢ ಮಾಸದಲ್ಲಿ ಹುಣ್ಣಿಮೆಯ ನಂತರ ಬರುವ ಮಂಗಳವಾರ ದೇವಿಯ ಜಾತ್ರೆ ನೆರವೇರುತ್ತದೆ. ಜಾತ್ರೆಗೆ ಬರುವ ಭಕ್ತರು ಕೋಳಿ ಮರಿಗಳನ್ನು ಖರೀದಿಸಿ ಮಂದಿರದ ಗರ್ಭಗುಡಿಯ ಮೇಲೆ ಹಾರಿಸುವಂತಹ ಪದ್ಧತಿ ಇಲ್ಲಿ ವಾಡಿಕೆಯಲ್ಲಿದೆ.
ತವರು ಮನೆ ದೇವತೆ ಎಂದರೇನು?: ವಡಗಾವಿಯ ಪಾಟೀಲ ಗಲ್ಲಿಯಲ್ಲಿರುವ ಮಂಗಾಯಿ ದೇವಿ ‘ತವರು ಮನೆಯ ದೇವತೆ’ ಎಂದೇ ಪ್ರಸಿದ್ದಿ ಪಡೆದಿದೆ. ಈ ದೇವಿಯ ಜಾತ್ರೆಗೆ ಹೆಣ್ಣು ಮಕ್ಕಳೇ ಹೆಚ್ಚಾಗಿ ಸೇರುತ್ತಾರೆ. ಬೆಳಗಾವಿ ಜಿಲ್ಲೆಯಿಂದ ಬೇರೆ ಬೇರೆ ಊರುಗಳಿಗೆ ಮದುವೆಯಾಗಿ ಹೋದ ಬಹುಪಾಲು ಹೆಣ್ಣುಮಕ್ಕಳು ಜಾತ್ರೆಗೆ ಬರುವುದು ಇಲ್ಲಿನ ವಿಶೇಷತೆ.
ಮಂಗಳವಾರ ಬೆಳಗಿನ ಜಾವ 5ಕ್ಕೆ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳನ್ನು ಪ್ರಾರಂಭಿಸಲಾಗಿತ್ತು. ಈ ಸಂದರ್ಭದಲ್ಲಿ ದೇವಿಗೆ ಅಭಿಷೇಕ, ಪುಷ್ಪಾಲಂಕಾರ, ಉಡಿ ತುಂಬುವ ಕಾರ್ಯಗಳನ್ನು ಭಕ್ತರು ನೆರವೇರಿಸಿದ್ದಾರೆ. ಜಾತ್ರಾರಂಭದ ಮೊದಲ ದಿನ ಸರದಿ ಸಾಲಿನಲ್ಲಿ ನಿಂತು ಜನರು ದೇವಿಯ ದರ್ಶನ ಪಡೆದು ಪುನೀತರಾದರು.
ಬಿಗಿ ಪೊಲೀಸ್ ಬಂದೋಬಸ್ತ್: ಜಾತ್ರೆಗೆ ಅಪಾರ ಪ್ರಮಾಣದಲ್ಲಿ ಭಕ್ತರು ಸೇರಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬೆಳಗಾವಿ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ: ಪುತ್ತೂರಿನಲ್ಲಿ ಬಸ್ಗೆ ಕಲ್ಲು, ಕಡಬದಲ್ಲಿ ಶಾಲೆಗಳಿಗೆ ರಜೆ