ಬೆಳಗಾವಿ: ಮಾಜಿ ಶಾಸಕ ಅರವಿಂದ್ ಪಾಟೀಲ್ ಶೀಘ್ರದಲ್ಲಿಯೇ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸಿಪಿಎಡ್ ಮೈದಾನದಲ್ಲಿ ಸರಳ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಖಾನಾಪುರ ಕ್ಷೇತ್ರದಿಂದ ಪಕ್ಷೇತರ ಶಾಸಕರಾಗಿ ಎಂಇಎಸ್‌ನ ಕರಾಳ ದಿನಾಚರಣೆಯಲ್ಲಿ ಭಾಗಿಯಾಗುತ್ತಿದ್ದ ಮಾಜಿ ಶಾಸಕ ಅರವಿಂದ್ ಪಾಟೀಲ್ ಈಗ ಎಂಇಎಸ್ ಸಮಿತಿಯಲ್ಲಿ ಇಲ್ಲ. ಹೀಗಾಗಿ, ಆದಷ್ಟು ಬೇಗ ಅವರು ಬಿಜೆಪಿ ಸೇರ್ಪಡೆ ಆಗಲಿದ್ದಾರೆ. ನಾನು ಕೂಡ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದೆ, ಈಗ ಬಿಜೆಪಿಯಲ್ಲಿದ್ದೇನೆ. ಬಿಜೆಪಿ ಸಿದ್ಧಾಂತವೇ ಬೇರೆ ಇದೆ. ಹಾಗಾಗಿ, ಶೀಘ್ರದಲ್ಲಿಯೇ ಅರವಿಂದ್ ಪಾಟೀಲ್ರನ್ನು ಬಿಜೆಪಿಗೆ ಸೇರಿಸಿಕೊಳ್ಳುತ್ತೇವೆ ಎಂದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಪಕ್ಷಾತೀತವಾಗಿದೆ, ಸಹಕಾರ ಕ್ಷೇತ್ರದಲ್ಲಿ ಪಕ್ಷ ಬರುವುದಿಲ್ಲ. ಹೀಗಾಗಿ, ಅರವಿಂದ್ ಪಾಟೀಲ್ಗೆ ಬಿಜೆಪಿ ನಾಯಕರು ಬೆಂಬಲ ನೀಡುತ್ತಿದ್ದಾರೆ ಎನ್ನುವುದು ಸರಿಯಲ್ಲ. ಮಹಾನಗರ ಪಾಲಿಕೆಯಲ್ಲಿ ರಾತ್ರೋರಾತ್ರಿ ಕನ್ನಡದ ಧ್ವಜ ಹಾರಿಸಿ, ಬೆಳಿಗ್ಗೆ ತೆರವುಗೊಳಿಸಿರುವುದು ಸರಿಯಲ್ಲ. ಅದನ್ನು ಕಾನೂನು ಬದ್ಧವಾಗಿ ಮಾಡಬೇಕು ಎಂದರು. ಮಹದಾಯಿ ವಿಚಾರದಲ್ಲಿ ಗೋವಾ, ಮಹಾರಾಷ್ಟ್ರ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧ ಎಂಬ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗೂಂಡುರಾವ್ ಹೇಳಿಕೆಗೆ ಪ್ರತಿಕ್ರಿಯಿಸಿ, ನನಗೆ ಅದರ ಬಗ್ಗೆ ಮಾಹಿತಿ ಇಲ್ಲ, ಕಾಂಗ್ರೆಸ್ ಪಕ್ಷದವರು ಸ್ಪಷ್ಟಪಡಿಸಲಿ ಎಂದರು.
ಎಂಇಎಸ್ ಆಚರಣೆ ಮಾಡುವ ಕರಾಳ ದಿನಾಚರಣೆಗೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆ ಇಲ್ಲ. ಶಿವಸೇನೆ ಸೇರಿದಂತೆ ಹಲವು ಸಂಘಟನೆಗಳು ರಾಜಕೀಯವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ರಾಜ್ಯದ ಹಿತ ಕಾಪಾಡಲು ಯಾವ ತ್ಯಾಗಕ್ಕೂ ನಾವು ಸಿದ್ಧ ಎಂದು ಸ್ಪಷ್ಟಪಡಿಸಿದರು.