ಅಥಣಿ: ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ತಡರಾತ್ರಿ ಕಳ್ಳರು ಕೈಚಳಕ ತೋರಿದ್ದಾರೆ. ಸರಣಿ ಮನೆಗಳ್ಳತನ, ಬ್ಯಾಂಕ್ ಮತ್ತು ವಾಣಿಜ್ಯ ಮಳಿಗೆಗಳಿಗೆ ನುಗ್ಗಿ ಬೆಲೆ ಬಾಳುವ ವಸ್ತುಗಳು ಮತ್ತು ಹಣ ದೋಚಿ ಪರಾರಿಯಾಗಿದ್ದು, ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಗ್ರಾಮಸ್ಥ ಗೋಪಾಲ ಸನದಿ ಮನೆಯಲ್ಲಿ 10 ಸಾವಿರ ರೂ, ರಾಮು ಗೋಪನೆ ಎಂಬುವವರ ಹಿಟ್ಟಿನ ಗಿರಣಿಯಲ್ಲಿ 2 ಸಾವಿರ ರೂ, ಧ್ರುವಾ ಜೋಶಿ, ಕಾಳಪ್ಪಾ ಬಡಿಗೇರಗೆ ಸೇರಿದ 20 ತೊಲೆ ಬೆಳ್ಳಿ, ಒಂದು ತೊಲೆ ಬಂಗಾರ ಹಾಗೂ 6 ಸಾವಿರ ರೂ. ಕಿರಣ್ ಕುಮಾರ ನಂದೇಶ್ವರ ಅವರಿಗೆ ಸೇರಿದ ಒಂದು ತೊಲೆ ಬಂಗಾರ, 1 ತೊಲೆ ಬೆಳ್ಳಿ ಸೇರಿದಂತೆ 70 ಸಾವಿರ ರೂ. ಅಶೋಕ ಉಪಾಧ್ಯ ಅವರ ಅಂಗಡಿಯಲ್ಲಿ 6 ಸಾವಿರ, ಮಲ್ಲಪ್ಪಾ ಮೀಶಿ ಅವರ ಮನೆಯಲ್ಲಿ ಎರಡೂವರೆ ತೊಲೆ ಬಂಗಾರ, ಸುವರ್ನಾ ಹಳಿಂಗಳಿ, ರಪೀಕ ಮುಲ್ಲಾ ಅಂಗಡಿಯಿಂದ 3 ಸಾವಿರ ನಗದು, ಮೈರಾಜಬಿ ಮುಲ್ಲಾ ಮನೆಯಲ್ಲಿ ಒಂದು ತೊಲೆ ಬಂಗಾರ, 10 ತೊಲೆ ಬೆಳ್ಳಿಯನ್ನು ಕಳ್ಳರು ದೋಚಿದ್ದಾರೆ. ಅಲ್ಲದೇ ಕೆವಿಜಿ ಬ್ಯಾಂಕ್, ಮಲ್ಲಿಕಾರ್ಜುನ ದೇವಾಲಯದ ದ್ವಾರ ಬಾಗಿಲು ಮುರಿದು ಕೊಠಡಿ ಜಾಲಾಡಿದ್ದಾರೆ ಎನ್ನಲಾಗ್ತಿದೆ.
ಅಥಣಿ ಪೊಲೀಸರಿಗೆ ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಾಧ್ಯಮಗಳೊಂದಿಗೆ ಗ್ರಾಮಸ್ಥರು ಮಾತನಾಡಿ, ಕಳೆದ ತಿಂಗಳಷ್ಟೇ ಕೋಕಟನೂರ ಗ್ರಾಮದಲ್ಲಿ ಇದೇ ರೀತಿಯ ಸರಣಿ ಮನೆಗಳ್ಳತನ ನಡೆದರೂ ಪೊಲೀಸ್ ಇಲಾಖೆ ಅವರನ್ನು ಬಂಧಿಸಲು ಯಶಸ್ವಿಯಾಗಲಿಲ್ಲ. ಹಾಗಾಗಿ ಮತ್ತೆ ನಮ್ಮ ಗ್ರಾಮದಲ್ಲಿ ಈ ರೀತಿ ಕಳ್ಳತನವಾಗಿದೆ ಎಂದು ಪೊಲೀಸರ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು.