ಬೆಳಗಾವಿ: ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕುಂದಾನಗರಿಯ ಎಪಿಎಂಸಿ ವರ್ತಕರ ಆಕ್ರೋಶ ಮುಂದುವರೆದಿದೆ. ನಗರದಲ್ಲಿ ಖಾಸಗಿ ಮಾರುಕಟ್ಟೆ ಬಂದ್ ಮಾಡಿ, ಇಲ್ಲವೇ ದಯಾಮರಣಕ್ಕೆ ಅವಕಾಶ ನೀಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಇಂದು ಮನವಿ ಮಾಡಿದರು. ನಗರದ ಡಿಸಿ ಕಚೇರಿಗೆ ಆಗಮಿಸಿದ ಸರ್ಕಾರಿ ಎಪಿಎಂಸಿ ವರ್ತಕರು ಖಾಸಗಿ ತರಕಾರಿ ಮಾರುಕಟ್ಟೆ ರದ್ದು ಮಾಡುವಂತೆ ಆಗ್ರಹಿಸಿದರು.
ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ ವರ್ತಕರು, ಸರ್ಕಾರಿ ಎಪಿಎಂಸಿ ಹೋಲ್ಸೇಲ್ ತರಕಾರಿ ಮಾರುಕಟ್ಟೆ ಉಳಿಸಬೇಕು. ಖಾಸಗಿ ಮಾರುಕಟ್ಟೆ ಬಂದ್ ಮಾಡಬೇಕು. ಎಪಿಎಂಸಿ ಕಾಯ್ದೆ ಪರಿಣಾಮವಾಗಿ ಬೆಳಗಾವಿ ಸರ್ಕಾರಿ ಎಪಿಎಂಸಿ ಮಾರುಕಟ್ಟೆ ಇದ್ದರೂ ಪರ್ಯಾಯವಾಗಿ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಗೆ ಅನುಮತಿ ಕೊಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬೀದಿಗೆ ಬಂದ ವರ್ತಕರು: ಇದರಿಂದ ಸರ್ಕಾರಿ ಎಪಿಎಂಸಿ ವರ್ತಕರು ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ತಕ್ಷಣವೇ ಮುಖ್ಯಮಂತ್ರಿಗಳು ಖಾಸಗಿ ಮಾರುಕಟ್ಟೆ ಬಂದ್ ಮಾಡಬೇಕು ಎಂದು ಒತ್ತಾಯ ಮಾಡಿದ್ರು. ಬೆಳಗಾವಿ ಎಪಿಎಂಸಿ ಮಾರುಕಟ್ಟೆ ಉಳಿಸುವಂತೆ ವರ್ತಕರು, ರೈತರು ನಡೆಸುತ್ತಿರುವ ಹೋರಾಟ 55ನೇ ದಿನಕ್ಕೆ ಕಾಲಿಟ್ಟಿದೆ. ಕಾನೂನಿನ ಪ್ರಕಾರ, ಲಕ್ಷಾಂತರ ರೂಪಾಯಿ ಕೊಟ್ಟು ಎಪಿಎಂಸಿಯಲ್ಲಿ ಅಂಗಡಿ ಪಡೆದ ವರ್ತಕರು ಬೀದಿಗೆ ಬರುವಂತಾಗಿದೆ.
ದಯಾಮರಣಕ್ಕೆ ಮನವಿ: ಖಾಸಗಿ ಮಾರುಕಟ್ಟೆ ಆರಂಭವಾಗಿದ್ದರಿಂದ ಎಪಿಎಂಸಿ ಮಾರುಕಟ್ಟೆಯಲ್ಲಿ ಶೇಕಡಾ 80ರಷ್ಟು ವ್ಯಾಪಾರ ಕುಸಿತವಾಗಿದೆ. ಹೀಗಾಗಿ, ಬೆಳಗಾವಿ ಎಪಿಎಂಸಿ ಉಳಿಸಲು ಸಿಎಂ ಬೊಮ್ಮಾಯಿ ಒಂದು ವಾರದಲ್ಲಿ ಕ್ರಮ ಕೈಗೊಳ್ಳಬೇಕಿದೆ. ಖಾಸಗಿ ಮಾರುಕಟ್ಟೆ ಬಂದ್ ಮಾಡದಿದ್ದರೆ ದಯಾಮರಣಕ್ಕೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗೆ ವರ್ತಕರು ಮನವಿ ಮಾಡಿದ್ದಾರೆ.
ಮನವಿ ಸ್ವೀಕರಿಸಲು ಬಂದ ಡಿಸಿ ಮುಂದೆಯೂ ಹೋರಾಟಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಒಟ್ಟಾರೆ, ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆ ವಾಪಸ್ ಪಡೆದ್ರು ರಾಜ್ಯ ಸರ್ಕಾರ ಇನ್ನೂ ವಾಪಸ್ ಪಡೆದಿಲ್ಲ. ಇದರಿಂದ ಬೆಳಗಾವಿ ಎಪಿಎಂಸಿ ತರಕಾರಿ ಮಾರುಕಟ್ಟೆ ಮುಚ್ಚುವಂತಹ ಸ್ಥಿತಿಗೆ ಬಂದು ತಲುಪಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಓದಿ: ಒಬಿಸಿ ಮೀಸಲಾತಿ ಅಂತಿಮಗೊಳಿಸಿಯೇ ಜಿಪಂ, ತಾಪಂ ಚುನಾವಣೆ ನಡೆಸುತ್ತೇವೆ : ಸಚಿವ ಈಶ್ವರಪ್ಪ