ಬೆಳಗಾವಿ: ಹಿಂದೂ ದೇವಸ್ಥಾನಗಳಲ್ಲಿ ಮುಸ್ಲಿಂ ವ್ಯಾಪಾರಸ್ಥರಿಗೆ ನಿರ್ಬಂಧ ಹೇರಿರುವುದು ಬಿಜೆಪಿ ಹಿಡನ್ ಅಜೆಂಡಾ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಟೀಕಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮದು ಜಾತ್ಯಾತೀತ ದೇಶ. ಎಲ್ಲ ಸಮುದಾಯಗಳು ಒಂದಾಗಿ ಬಾಳುವ ಇತಿಹಾಸವಿದೆ ಎಂದರು.
ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿವಾದ ಸೃಷ್ಟಿಸುವಂತಹ ಸೂಕ್ಷ್ಮ ವಿಚಾರಗಳನ್ನೇ ತನ್ನ ಅಸ್ತ್ರವನ್ನಾಗಿಸಿದೆ. ಹಿಜಾಬ್, ಕೇಸರಿ ಶಾಲು, ಶಿವಮೊಗ್ಗ ಹರ್ಷ ಹತ್ಯೆ ವಿಚಾರ ಆಯ್ತು. ಬಳಿಕ 'ದಿ ಕಾಶ್ಮೀರ ಫೈಲ್ಸ್' ಚಿತ್ರದ್ದು. ಆ ಸಿನಿಮಾ ಕೂಡ ಚುನಾವಣಾ ಪ್ರಚಾರದ ಒಂದು ಭಾಗವಾಗಿದೆ ಎಂದು ಹೇಳಿದರು.
ವಾಯವ್ಯ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಕ್ಕೆ ನಡೆಯಲಿರುವ ಚುನಾವಣೆಗೆ ಈ ತಿಂಗಳಾಂತ್ಯಕ್ಕೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗುವುದು. ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರದಿಂದ ತಲಾ ಮೂವರು ಅಭ್ಯರ್ಥಿಗಳು ಆಕಾಂಕ್ಷಿಗಳಿದ್ದಾರೆ. ಈ ಎರಡೂ ಕ್ಷೇತ್ರದಿಂದ ಬೆಳಗಾವಿ ಜಿಲ್ಲೆಯಿಂದಲೇ ಅಭ್ಯರ್ಥಿ ಆಯ್ಕೆಮಾಡುವ ಕುರಿತು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಬೆಳಗಾವಿ ಪಾಲಿಕೆ ಬಜೆಟ್: ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು ಆರು ತಿಂಗಳಾಗಿದೆ. ಆದರೆ, ಇನ್ನೂ ಮೇಯರ್, ಉಪಮೇಯರ್ ಚುನಾವಣೆ ನಡೆಯುತ್ತಿಲ್ಲ. ಆಡಳಿತಾಧಿಕಾರಿಯೇ ಬಜೆಟ್ ಮಂಡಿಸಿದ್ದಾರೆ. ಬಿಜೆಪಿ ಅಧಿಕಾರದಲ್ಲಿ ಮನಬಂದಂತೆ ಬಜೆಟ್ ಮಂಡನೆ ಮಾಡಲಾಗಿದೆ ಎಂದು ದೂರಿದರು.
ಲಖನ್ ಬಿಜೆಪಿ ಸೇರ್ಪಡೆ ಗೊತ್ತಿಲ್ಲ: ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ವಿಚಾರ ನನಗೆ ಗೊತ್ತಿಲ್ಲ. ಅದನ್ನು ಬಿಜೆಪಿ ನಾಯಕರನ್ನೇ ಕೇಳಬೇಕು. ರಮೇಶ್ ಬದಲಿಗೆ ಲಖನ್ ಸಂಪುಟಕ್ಕೆ ಸೇರ್ಪಡೆಯಾಗುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ವೈಯಕ್ತಿಕವಾಗಿ ನಾವೆಲ್ಲ ಸಹೋದರರು ಒಂದೇ ಆಗಿದ್ದೇವೆ. ಆದರೆ, ರಾಜಕೀಯದಲ್ಲಿ ಬೇರೆ ಬೇರೆ ಎಂದರು.
ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಖ್ಯಾತ ಬಾಲಿವುಡ್ ನಟ ಸುನಿಲ್ ಶೆಟ್ಟಿ