ಬೆಳಗಾವಿ : ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಬಿಜೆಪಿ ಸರ್ಕಾರದ ವಾಗ್ದಾಳಿ ನಡೆಸಿದರು.
ಬಿಜೆಪಿ ಸರ್ಕಾರ ಒಂದೆಡೆಯಿಂದ ಕೊಟ್ಟು, ಮತ್ತೊಂದೆಡೆಯಿಂದ ವಸೂಲಿ ಮಾಡುವ ನೀತಿಯನ್ನು ಅನುಸರಿಸುತ್ತಿದೆ. ಕೇಂದ್ರದಲ್ಲಿ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಗ್ಯಾಸ್ ಸಿಲಿಂಡರ್ ಬೆಲೆ 400 ರೂ. ಇತ್ತು, ಈಗ 900 ರೂಪಾಯಿಗೆ ಬಂದು ತಲುಪಿದೆ. ಉಜ್ವಲಾ ಯೋಜನೆಯಡಿ ಉಚಿತ ಸಿಲಿಂಡರ್ ನೀಡ್ತಾರೆ. ನಾವು ಮಾರ್ಕೆಟ್‌ನಿಂದ ತಂದ್ರೆ ಎರಡೂವರೆಯಿಂದ ಮೂರು ಸಾವಿರಕ್ಕೆ ಸಿಗುತ್ತದೆ. ಕಡಿಮೆ ಹಣಕ್ಕೆ ಸಿಲಿಂಡರ್ ಕೊಡುವ ಸರ್ಕಾರ ಮೂರೇ ತಿಂಗಳಲ್ಲಿ ಅದನ್ನು ವಾಪಸ್ ವಸೂಲಿ ಮಾಡುತ್ತದೆ. ಈ ರೀತಿ ಕಳೆದ 7 ವರ್ಷಗಳಿಂದ ಜನರನ್ನು ದೋಚುವ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದರು.
ಓದಿ : ಬೆಳಗಾವಿ, ಮಸ್ಕಿ, ಬಸವಕಲ್ಯಾಣದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳಲಿದೆ: ನಳಿನ್ ಕುಮಾರ್ ಕಟೀಲ್
ವಿಮಾನ ನಿಲ್ದಾಣ ಮಾರಾಟ ಆಯ್ತು, ಎಲ್ಐಸಿ ಹೋಯ್ತು, ಬ್ಯಾಂಕ್ ಹೋಯ್ತು, ರೈಲ್ವೆ ಮಾರಾಟವಾಗಲು ರೆಡಿಯಾಗಿದೆ. ದೇಶದ ಆಸ್ತಿ ಕೇವಲ 10 ಜನರ ಕೈಗೆ ಹೋಗುವಂತ ವ್ಯವಸ್ಥೆಯಿದೆ. ಆಕಸ್ಮಿಕವಾಗಿ ಬಂದಿರುವ ಈ ಚುನಾವಣೆ ಬಿಜೆಪಿಗೆ ಪಾಠವಾಗಬೇಕು. ಜನ ವಿರೋಧಿ ಕೆಲಸ ಮಾಡಿದ್ರೆ, ಅದನ್ನು ಬದಲಾವಣೆ ಮಾಡುವ ಶಕ್ತಿ ಜನರಿಗಿದೆ ಎಂಬುದನ್ನು ತೋರಿಸಿಕೊಡಬೇಕು. ಬಿಜೆಪಿಯವರು ತಾವು ಮಾಡಿದ್ದೇ ಗ್ರ್ಯಾಂಟೆಡ್, ಅದೇ ಫೈನಲ್ ಅಂದುಕೊಂಡಿದ್ದಾರೆ. ಅವರಿಗೆ ಜನರ ಅಭಿಪ್ರಾಯ ಲೆಕ್ಕಕ್ಕೇ ಇಲ್ಲ. ಕೇಂದ್ರ ಸರ್ಕಾರದ ಕಣ್ಣು ತೆರೆಸಲು ಒಂದೊಳ್ಳೆ ಅವಕಾಶ ಬಂದಿದೆ. ನಾನು ಆಯ್ಕೆಯಾದರೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕೆಲಸ ಮಾಡ್ತೇನೆ ಎಂದು ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.