ಚಿಕ್ಕೋಡಿ: ಬೆಂಬಲ ಬೆಲೆ ಹಾಗೂ ಎಂ.ಎಸ್.ಪಿಗಿಂತ ಕಡಿಮೆ ದರದಲ್ಲಿ ಖರೀದಿ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸುವಂತೆ ಒತ್ತಾಯಿಸಿ ತಾಲೂಕಿನ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟಿಸಿದ್ದಾರೆ.
ಜಿಲ್ಲೆಯ ಚಿಕ್ಕೋಡಿ ಪಟ್ಟಣದ ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಿದ ರೈತರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರಿಗೆ ಸಂಬಂಧಪಟ್ಟ ಕಾಯ್ದೆ ಕಾನೂನುಗಳನ್ನು ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡಿರುವುದನ್ನು ಮರಳಿ ಪಡೆಯಬೇಕು ಹಾಗೂ ಕೃಷಿ ಉತ್ಪನ್ನಗಳನ್ನು ಎಂಎಸ್‌ಪಿ ಬೆಲೆಗಳಿಗಿಂತ ಕಡಿಮೆ ಬೆಲೆಗೆ ಮಾರಾಟ ಮತ್ತು ಖರೀದಿ ಮಾಡುವುದು ಅಪರಾಧ ಎಂದು ಕಾನೂನು ತಂದಿರುವ ಪಂಜಾಬ್ ಸರ್ಕಾರದಂತೆ ರಾಜ್ಯ ಸರ್ಕಾರವು ಕಾನೂನು ತರಬೇಕೆಂದು ಒತ್ತಾಯಿಸಿದರು.
ಕೇರಳ ಸರ್ಕಾರ ತರಕಾರಿ ಬೆಳೆಗಳಿಗೆ ನಿರ್ದಿಷ್ಟ ಬೆಲೆ ನಿಗದಿ ಮಾಡಿರುವಂತೆ ರಾಜ್ಯ ಸರ್ಕಾರವೂ ನಿಗದಿ ಮಾಡಬೇಕು ಮತ್ತು ರಾಜ್ಯದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಬೇಕು ಮತ್ತು ಕಬ್ಬಿನ ಬಿಲ್‌ನ್ನು ಕಬ್ಬು ಕಟಾವು ಮತ್ತು ಕಬ್ಬು ಸಾಗಾಣಿಕೆ ವೆಚ್ಚ ಹೊರತುಪಡಿಸಿ ರೈತರಿಗೆ ಪ್ರತಿ ಟನ್ಗೆ 3,500 ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.