ಬೆಳಗಾವಿ: ಅತೀ ವೃಷ್ಟಿ ಹೊಡೆತದಿಂದ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದ ನೇಕಾರಿಕೆ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಮತ್ತೆ ಕೊರೊನಾ ಮಹಾಮಾರಿ ಹೊಡೆತಕ್ಕೆ ತುತ್ತಾಗಿದ್ದು ನೇಕಾರರ ಬದುಕು ದುಸ್ಥರವಾಗಿದೆ.
ನಗರ ಹಾಗೂ ಸಮೀಪದ ಡೊಂಬರಕೊಪ್ಪ ಗ್ರಾಮದಲ್ಲಿ ನೂರಾರು ಕುಟುಂಬಗಳು ನೇಕಾರಿಕೆಯನ್ನೇ ಮುಖ್ಯ ವೃತ್ತಿಯನ್ನಾಗಿಸಿಕೊಂಡು ಜೀವನ ನಡೆಸುತ್ತಿವೆ. ಕೊರೊನಾ ವೈರಸ್ ಕಾರಣದಿಂದಾಗಿ ಇಡೀ ದೇಶವೇ ಲಾಕ್ ಡೌನ್ ಮಾಡಿರುವ ಹಿನ್ನೆಲೆ, ಹಗಲು-ರಾತ್ರಿಯೆನ್ನದೆ ನೇಯಲ್ಪಟ್ಟ ಸಾವಿರಾರು ಸೀರೆಗಳು ಮಾರಾಟವಾಗದೆ ಉಳಿದಿವೆ.
ಇದು ಮದುವೆ, ಜಾತ್ರೆ ಸೇರದಿಂತೆ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವ ಸಮಯ. ಆದ್ರೆ, ಈ ಬಾರಿ ಕೊರೊನಾ ಮಹಾಮಾರಯಿಂದ ಎಲ್ಲವೂ ಸ್ಥಗಿತಗೊಂಡಿವೆ. ಹೀಗಾಗಿ, ಲಕ್ಷಾಂತರ ರೂ. ಸಾಲ ಮಾಡಿ ಯಂತ್ರಗಳನ್ನು ಖರೀದಿಸಿ ಸೀರೆಗಳನ್ನು ನೆಯ್ದಿರುವ ನೇಕಾರರು ಸೀರೆಗಳಿಗೆ ಬೇಡಿಕೆಯಿಲ್ಲದೆ ಕಂಗಾಲಾಗಿದ್ದಾರೆ.
ಜಿಲ್ಲೆಯ ಕಿತ್ತೂರಿನಲ್ಲಿ ಶತಮಾನಗಳ ನಂತರ ನಡೆಯಬೇಕಿದ್ದ ಐತಿಹಾಸಿಕ ಗ್ರಾಮದೇವಿ ಜಾತ್ರೆ ಕೊರೊನಾ ಭೀತಿಯಿಂದ ಮುಂದೂಡಲ್ಪಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ನೇಯಲ್ಪಟ್ಟ ಸೀರೆಗಳನ್ನು ವಾಹನದಲ್ಲಿ ಹೇರಿಕೊಂಡು ನಗರದ ಪ್ರದೇಶಗಳ ಗೋಡೌನ್‍ಗಳಿಗೆ ಸಾಗಿಸಬೇಕೆಂದರೆ ಪೊಲೀಸರು ವಾಹನದಲ್ಲಿ ಸಾಗಣೆಯ ಅನುಮತಿ ಪತ್ರ ನೀಡುತ್ತಿಲ್ಲ. ಮಗ್ಗಗಳ ಸ್ಥಾಪನೆಗೆಂದು ಮಾಡಿದ ಸಾಲದ ಬಡ್ಡಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಸರ್ಕಾರದ ಆದೇಶದಂತೆ ಸಾಲ ವಸೂಲಾತಿ ಈಗ ಬಂದ್ ಆಗಿದ್ದರೂ, ಮುಂದೆಯಾದರೂ ಕೊಡಲೇಬೇಕು. ಆಗ ಎಲ್ಲಿಂದ ಹಣ ತರುವುದು. ಸೀರೆಗಳ ಸಂಗ್ರಹ ಹೆಚ್ಚಾದರೆ ಕಡಿಮೆ ದರಕ್ಕೆ ಖರೀದಿಸುತ್ತಾರೆ. ಇದರಿಂದ ಅಲ್ಲೂ ನಷ್ಟವೇ ಎನ್ನುತ್ತಾರೆ ನೇಕಾರರು.
ಸರ್ಕಾರ ನಮ್ಮ ಕಷ್ಟವನ್ನು ಅರ್ಥಮಾಡಿಕೊಂಡು ಉದ್ಯೋಗಕ್ಕೆಂದು ಮಾಡಿರುವ ಸಾಲ ಮನ್ನಾ ಅಥವಾ ಬಡ್ಡಿ ಮನ್ನಾ ಮಾಡಿ ನೆಮ್ಮದಿ ಜೀವನಕ್ಕೆ ದಾರಿ ಮಾಡಿಕೊಡಬೇಕೆಂಬುವುದು ಎಂದು ನೇಕಾರಿಕೆ ಮಾಡುವ ಜನರ ಒತ್ತಾಯಿಸಿದ್ದಾರೆ.