ಚಿಕ್ಕೋಡಿ: ಕುಡಿಯುವ ನೀರು ಪೂರೈಕೆ ಮಾಡುವವರೆಗೆ ಹೋರಾಟ ಕೈ ಬಿಡುವುದಿಲ್ಲ ಎಂದು ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಪುರಸಭೆ ಕಚೇರಿಗೆ ಮುತ್ತಿಗೆ ಹಾಕಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಅಥಣಿ 19 ನೇ ವಾರ್ಡ್ನ ನೂರಕ್ಕೂ ಹೆಚ್ವು ನಿವಾಸಿಗಳು ಪುರಸಭೆಗೆ ಕೀಲಿ ಹಾಕಿ ಪ್ರತಿಭಟನೆ ಮಾಡಿದರು. ಈ ವೇಳೆ ಪ್ರತಿಭಟನಾಕಾರರ ಜೊತೆ ಏಕವಚನದಲ್ಲಿ ಮಾತನಾಡಿದ ಪುರಸಭೆ ಇಂಜಿನಿಯರ್ ಹುದ್ದಾರ ಹಾಗೂ ಜನರ ನಡುವೆ ವಾಗ್ವಾದ ನಡೆಯಿತು.
ಅಷ್ಟೇ ಅಲ್ಲ, ನೀರು ಪೂರೈಕೆ ಮಾಡುವವರೆಗೆ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದು ಪುರಸಭೆ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು. ನಂತರ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಿದಾಗ ಪ್ರತಿಭಟನೆ ಸ್ವಲ್ಪ ತಿಳಿಯಾಯಿತು.