ಬೆಳಗಾವಿ: ಕರ್ನಾಟಕದ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ, ಜತ್ತ, ಸಾತಾರ ಹೀಗೆ ಧಾರಾಕಾರ ಮಳೆಯಾಗಿ ಕೃಷ್ಣಾ ನದಿ ಮೈದುಂಬಿ ಹರಿಯುತ್ತಿದೆ. ಆದರೆ, ಕರ್ನಾಟಕದ ಗಡಿ ಭಾಗದಲ್ಲಿ ಮಾತ್ರ ಮಳೆ ಇಲ್ಲ. ಈ ಮಳೆಯ ಅಭಾವದಿಂದ ಹೈರಾಣಾದ ರೈತರು ಬೆಳೆದ ಕಬ್ಬಿನ ಬೆಳೆಯನ್ನು ಮೇವಿಗಾಗಿ ಮಾರಾಟ ಮಾಡುತ್ತಿದ್ದಾರೆ.
ಬೆಳಗಾವಿ ಜಿಲ್ಲೆಯ ಹಲವಾರು ತಾಲೂಕುಗಳು ಬರದ ಛಾಯೆಗೆ ತುತ್ತಾಗಿ ಮೇವು ಹಾಗೂ ಹನಿ ನೀರಿಗಾಗಿ ಪರಿತಪಿಸುವ ಪರಿಸ್ಥಿತಿ ಅಥಣಿ ಹಾಗೂ ಕಾಗವಾಡ ಭಾಗದ ಜನರಿಗೆ ಬಂದೊದಗಿದೆ. ಕೃಷ್ಣಾ ನದಿಯು ತುಂಬಿ ತುಳುಕುತ್ತಿದ್ರೂ ಅಥಣಿ ಹಾಗೂ ಕಾಗವಾಡ ವಿಧಾನಸಭಾ ವ್ಯಾಪ್ತಿಯಲ್ಲಿ ಸುಮಾರು 40 ಹಳ್ಳಿಗಳಿಗಿಂತ ಹೆಚ್ಚು ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಮತ್ತು ಜಾನುವಾರಗಳಿಗೆ ಕುಡಿಯುವ ನೀರು ಹಾಗೂ ಮೇವಿಗೂ ಸಹ ತುಂಬಾ ತೊಂದರೆ ಉಂಟಾಗುತ್ತಿದೆ. ಕರ್ನಾಟಕದ ಗೋಶಾಲೆ ಹಾಗೂ ಮೇವು ಬ್ಯಾಂಕ್‌ಗಳಿಗೆ ಒಣಗಿದ ಮೇವು ತರಿಸಿ ಅಲ್ಲಿನ ಜನರಿಗೆ ಒಣಗಿದ ಕಬ್ಬಿನ ಮೇವು ನೀಡಲಾಗುತ್ತಿದ್ದು, ಅದೇ ಗಡಿ ಭಾಗದ ಮಹಾರಾಷ್ಟ್ರದ ಹಳ್ಳಿಗಳಿಗೆ ಹಸಿ ಮೇವನ್ನು ಇಲ್ಲಿನ ಏಜೆಂಟರುಗಳು ಸಾಗಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರ ಪ್ರಾರಂಭಿಸಿರುವ ಮೇವು ಬ್ಯಾಂಕಗಳಲ್ಲಿ ನಿತ್ಯ ಬರುವ ಮೇವು ಕಳಪೆ ಮಟ್ಟದಾಗಿದ್ದು, ಸಪ್ಪೆಯಾದ ಹಾಗೂ ಬಾಡಿ ಒಣಗಿದ ಮೇವನ್ನು ಒದಗಿಸಲಾಗುತ್ತಿದೆ. ಆದರೆ, ಕರ್ನಾಟಕದಿಂದ ಮಹಾರಾಷ್ಟ್ರದ ವಿವಿಧ ಭಾಗಗಳಿಗೆ ಹಚ್ಚ ಹಸಿರಾಗಿರುವ ಹಾಗೂ ತಾಜಾ ಕಬ್ಬಿನ ಮೇವು ಸಾಗಿಸುತ್ತಿರುವ ಕರ್ನಾಟಕದ ಏಜೆಂಟರುಗಳು ರಾಜ್ಯದಲ್ಲಿ ದ್ರೋಹ ಮಾಡುತ್ತಿದ್ದಾರೆ. ಅವರಿಗೆ ಇಲ್ಲಿನ ಅಧಿಕಾರಿಗಳು ಕೂಡ ಸಾಥ್ ನೀಡುತ್ತಿದ್ದಾರೆ ಎನ್ನುವ ದೂರುಗಳು ಅಥಣಿ ಹಾಗೂ ಕಾಗವಾಡ ಭಾಗದ ರೈತರಿಂದ ಕೇಳಿ ಬರುತ್ತಿವೆ.
ಸತತ ಮೂರ್ನಾಲ್ಕು ವರ್ಷಗಳಿಂದ ಬರಗಾಲದ ಛಾಯೆಗೆ ಒಳಗಾಗಿ ಹೈರಾಣಾಗಿರುವ ಈ ಭಾಗದ ರೈತರು ಸರ್ಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹಿತ ಇಲ್ಲಿನ ಅಧಿಕಾರಿಗಳು ಮಾತ್ರ ಕ್ಯಾರೆ ಅನ್ನುತ್ತಿಲ್ಲ. ಈ ಭಾಗದ ರೈತರ ತೊಂದರೆಗಳನ್ನು ನೀಗಿಸುವ ಶಾಶ್ವತ ಪ್ರಯತ್ನಗಳನ್ನಾಗಲಿ ಯಾವ ಅಧಿಕಾರಿ ಅಥವಾ ಶಾಸಕರು ಮಾಡದಿರುವುದು ದೌರ್ಭಾಗ್ಯ. ಕಾಲುವೆಗೆ ಸರಿಯಾಗಿ ನೀರು ಬಿಡುತ್ತಿಲ್ಲಾ, ಕರಿಮಸೂತಿ ಏತ ನೀರಾವರಿ ಯೋಜನೆಯ ಮೂಲಕ ನೀರನ್ನು ಬಿಡುಗಡೆ ಮಾಡಿದರೂ ಸಹಿತ ಈ ನೀರು ಕೊನೆಯ ಗ್ರಾಮದವರೆಗೆ ತಲುಪುವುದು ಕನಸಿನ ಮಾತು. ಯಾಕೆಂದರೆ, ಈ ಭಾಗದಲ್ಲಿ ಕಾಲುವೆಗಳ ಮುಖಾಂತರ ನೀರು ಬಿಟ್ಟರೆ, ಆ ಕಾಲುವೆಗಳಿಗೆ ಮಧ್ಯದ ಗದ್ದೆಯ ಮಾಲೀಕರು ಪಂಪ್‌ಸೆಟ್ ಕುಡಿಸಿ ನೀರನ್ನು ತಮ್ಮ ಗದ್ದೆಗಳಿಗೆ ಬಿಟ್ಟು ಕೊಳ್ಳುತ್ತಿರುವುದರಿಂದ ಮುಂದಿನ ಹಳ್ಳಿಯ ರೈತರಿಗೆ ನೀರಿಲ್ಲದೆ ಹಿಡಿಶಾಪ ಹಾಕುತ್ತಾ ಕಾಲುವೆ ನೀರು ಬರುವ ನೀರಿಕ್ಷೆಯಲ್ಲಿ ಕುಳಿತಿದ್ದಾರೆ.
ಕರ್ನಾಟಕದ ಮೇವು ಮಹಾರಾಷ್ಟ್ರಕ್ಕೆ ಹೋಗದಂತೆ ನೋಡಿಕೋಳ್ಳುವುದು ತಾಲೂಕು ಆಡಳಿತದ ಕರ್ತವ್ಯವಾದರೂ ಇಲ್ಲಿನ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ. ಕರ್ನಾಟಕದಿಂದ ಸುಮಾರು 30ಕ್ಕೂ ಹೆಚ್ಚು ವಾಹನಗಳು ಮಹಾರಾಷ್ಟ್ರಕ್ಕೆ ಮೇವು ಸಾಗಾಣಿಕ್ಕೆ ಮಾಡುತ್ತಿದ್ದರು ಇಲ್ಲಿನ ತಾಲೂಕು ಆಡಳಿತ ಮಂಡಳಿ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ ಎಂದೂ ಸ್ಥಳೀಯರು ಆರೋಪಿಸುತ್ತಿದ್ದಾರೆ.