ಬೆಳಗಾವಿ: ಕೊರೊನಾ ಆತಂಕವಿಲ್ಲದೇ ಕನಿಷ್ಠ ಸಾಮಾಜಿಕ ಅಂತರ ಮರೆತು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು, ಮಕ್ಕಳು ಸೇರಿಕೊಂಡು ಅಮವಾಸ್ಯೆ ನಿಮಿತ್ತ ಮಲಪ್ರಭಾ ನದಿಯ ದಡದಲ್ಲಿ ಪೂಜೆ ಮಾಡುತ್ತಿದ್ದು, ಕೊರೊನಾ ಹೆಚ್ಚಳವಾಗುವ ಭೀತಿ ಎದುರಾಗಿದೆ.
ಖಾನಾಪೂರ ತಾಲೂಕಿನ ಪಟ್ಟಣದ ಬಳಿ ಇರುವ ಮಲಪ್ರಭಾ ನದಿ ತೀರದ ದಂಡೆಯಲ್ಲಿ ಅಮಾವಾಸ್ಯೆ ನಿಮಿತ್ತ ಸಾವಿರಾರು ಜನರು ಸೇರಿಕೊಂಡು ಪೂಜೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಅಲ್ಲಿ ಸೇರಿದ ಜನರಿಗೆ ಮಾತ್ರ ಕೊರೊನಾದ ಯಾವುದೇ ಭೀತಿ ಇಲ್ಲ. ಮಾಸ್ಕ್ ಹಾಕಿಕೊಂಡಿಲ್ಲ. ಸಾಮಾಜಿಕ ಅಂತರವೂ ಇಲ್ಲದೇ ಗುಂಪು ಗುಂಪಾಗಿ ಸೇರಿದ್ದು, ಕೊರೊನಾ ಹೆಚ್ಚಳವಾಗುವ ಭಯ ಕಾಡುತ್ತಿದೆ.
ದೇಶ ಸೇರಿದಂತೆ ಇಡೀ ವಿಶ್ವವನ್ನೇ ಕಾಡುತ್ತಿರುವ ಕೊರೊನಾ ವೈರಸ್ ತಡೆಗೆ ರಾಜ್ಯ, ಕೇಂದ್ರ ಸರ್ಕಾರಗಳು ನಾನಾ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಕೊರೊನಾ ತಡೆಗಾಗಿ ಹಬ್ಬಗಳನ್ನು ಆಚರಣೆ ಮಾಡುವಾಗ ಸರಳವಾಗಿ ತಮ್ಮ ಮನೆಯಲ್ಲಿಯೇ ಆಚರಿಸುವಂತೆ ಎಷ್ಟೇ ಹೇಳಿದ್ದರೂ ಜನರು ಮಾತ್ರ ಯಾವುದಕ್ಕೂ ಕ್ಯಾರೆ ಎನ್ನುತ್ತಿಲ್ಲ.
ಜನರು ಸ್ವಲ್ಪ ಎಚ್ಚರ ತಪ್ಪಿದರೂ ಕೊರೊನಾಗೆ ಬಲಿಯಾಗಬೇಕಾಗುತ್ತದೆ. ಕಾರಣ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾವಿನ ಪ್ರಮಾಣವೂ ಹೆಚ್ಚಾಗುತ್ತಿದ್ದು, ಜನರು ನಿರ್ಲಕ್ಷ್ಯ ವಹಿಸಿದರೆ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದರಲ್ಲಿ ಸಂಶಯವೇ ಇಲ್ಲ.
ಹೀಗಾಗಿ ಕೊರೊನಾದ ಗಂಭೀರತೆ ಅರ್ಥ ಮಾಡಿಕೊಂಡು ಜನರು ಸ್ವಯಂ ನಿಯಂತ್ರಣ ಮಾಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು. ಸ್ಯಾನಿಟೈಸ್ ಬಳಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.