ಚಿಕ್ಕೋಡಿ : ಶಾಸಕ ಮುನಿರತ್ನಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕೊಟ್ಟ ಮಾತು ತಪ್ಪಿದ್ದಾರೆ ಅಂತ ಹೇಳಕ್ಕಾಗಲ್ಲ. ಸಚಿವ ಸ್ಥಾನ ಎಷ್ಟಿರುತ್ತವೆ ಅದರ ಮೇಲೆ ಸಚಿವ ಸ್ಥಾನ ಕೊಡಬೇಕಾಗುತ್ತೆ, ಬೇರೆ ಪಕ್ಷದಿಂದ ಬಂದವರಿಗೆ ನ್ಯಾಯ ಒದಗಿಸುವ ಕೆಲಸ ರಾಜ್ಯ, ರಾಷ್ಟ್ರೀಯ ಮುಖಂಡರು ಮಾಡುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಚಿಕ್ಕೋಡಿಯಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಆಕಸ್ಮಿಕವಾಗಿ ಮುನಿರತ್ನರಿಗೆ ಸಚಿವ ಸ್ಥಾನ ತಪ್ಪಿದ್ರೂ ಸಚಿವ ಸ್ಥಾನಮಾನದ ಹುದ್ದೆ ಕೊಡ್ತಾರೆ. ಮುಖ್ಯಮಂತ್ರಿಗಳು ಕೊಟ್ಟ ಮಾತಿಗೆ ತಪ್ಪುವವರಲ್ಲ. ಸಚಿವ ಸಂಪುಟ ಹೊಂದಾಣಿಕೆ ಬಗ್ಗೆ ಪ್ರೆಷರ್ ಇರುವುದರಿಂದ ತಪ್ಪಿ ಹೋಗಿದ್ರೂ ಸಿಎಂ ಯಡಿಯೂರಪ್ಪನವರು ನ್ಯಾಯ ಒದಗಿಸುವ ಪ್ರಯತ್ನ ಮಾಡುತ್ತಾರೆ ಎಂದಿದ್ದಾರೆ.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಂದು ಮನೆಯಂತೆ ಇದ್ದಾಗ ಅಲ್ಲಿ ಸಾಕಷ್ಟು ತೊಂದರೆ ಇರುತ್ತವೆ. ನಮ್ಮದು ರಾಷ್ಟ್ರೀಯ ಪಕ್ಷವಾದ್ದರಿಂದ ಕೆಲವೊಂದು ಅಸಮಾಧಾನ, ನಿರಾಶೆಗಳು ಇರುತ್ತವೆ. ಹಾಗಂತ ಹೊರಗಡೆ ಮಾತನಾಡುವುದು ತಪ್ಪು. ಏನೇ ಅಸಮಾಧಾನ ಇದ್ರೂ ಪಕ್ಷದ ಒಳಗಡೆ ಬಗೆಹರಿಸುವ ಕೆಲಸವಾಗುತ್ತದೆ. ಆದರೆ, ಅವರು ಹೊರಗಡೆ ಮಾತಾಡುವುದು ತಪ್ಪಾಗುತ್ತದೆ. ನಮ್ಮ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಬಂದಾಗ ಎಲ್ಲರೂ ಅವರ ಜೊತೆ ಚರ್ಚೆ ಮಾಡಿ ಅವರೇ ಕ್ರಮಕೈಗೊಳ್ಳುವ ಹಾಗೇ ಮಾಡ್ತಾರೆ ಎಂದರು.
ಸಿಡಿ ವಿಚಾರವಾಗಿ ಪ್ರತಿಕ್ರಿಯಿಸಿದ ಶಶಿಕಲಾ ಜೊಲ್ಲೆ, ಅದರ ಬಗ್ಗೆ ನನಗೆ ಅಷ್ಟೊಂದು ಗೊತ್ತಿಲ್ಲ. ಯಾರು ಅದರ ಬಗ್ಗೆ ಹೇಳ್ತಿದ್ದಾರೆ ಅವರೇ ಅದನ್ನು ಬಹಿರಂಗಪಡಿಸಲಿ. ನಂತರ ಏನು ಸತ್ಯ ಏನು ಮಿಥ್ಯ ಎಂಬುದು ತಿಳಿಯುತ್ತದೆ ಎಂದರು.