ಬೆಳಗಾವಿ: ಎಂಇಎಸ್ ಪುಂಡರ ಪುಂಡಾಟಿಕೆ ವಿರುದ್ಧ ಕನ್ನಡ ಹೋರಾಟಗಾರರು ಸಿಡಿದೆದ್ದಿದ್ದು, ನಗರದ ಚೆನ್ನಮ್ಮ ವೃತ್ತದಿಂದ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಕನ್ನಡ ಹೋರಾಟಗಾರರನ್ನು ಹಿರೇಬಾಗೇವಾಡಿಯಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ವೇಳೆ ಪೊಲೀಸರು ಮತ್ತು ಕನ್ನಡ ಸಂಘಟನೆಗಳ ಮುಖಂಡರ ಮಧ್ಯೆ ತೀವ್ರ ವಾಗ್ವಾದ ನಡೆಯಿತು. ಗಡಿ ವಿಚಾರ ಇಟ್ಟುಕೊಂಡು ಪದೇಪದೆ ಕನ್ನಡಿಗರ ಸ್ವಾಭಿಮಾನವನ್ನು ಕೆದಕುವ ಕೆಲಸವನ್ನು ಮಾಡುತ್ತಿರುವ ಎಂಇಎಸ್, ಶಿವಸೇನೆ ಪುಂಡರ ವಿರುದ್ಧ ಕನ್ನಡಿಗರು ಸಿಡಿದೆದ್ದಾರೆ.
ಆದ್ರೆ, ತಾಲೂಕಿನ ಹಿರೇಬಾಗೆವಾಡಿ ಟೋಲ್ ನಾಕ ಬಳಿ ಕರವೇ ಕಾರ್ಯಕರ್ತರನ್ನು ತಡೆದ ಪೊಲೀಸರು , ಬೆಳಗಾವಿ ನಗರ ಹಾಗೂ ತಾಲೂಕಿನಾದ್ಯಂತ ನಿಷೇಧಾಜ್ಞೆ ಇದೆ. ಹೀಗಾಗಿ, ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ ಎಂದು ಕನ್ನಡ ಹೋರಾಟಗಾರರ ಮನವೊಲಿಸಲು ಪ್ರಯತ್ನಿಸಿದರು.
ಈ ವೇಳೆ ನಡೆದ ನೂಕು ನುಗ್ಗಲಿನಲ್ಲಿ ಕನ್ನಡ ಹೋರಾಟಗಾರನೊಬ್ಬ ಕುಸಿದು ಬಿದ್ದ ಘಟನೆ ಕೂಡ ನಡೆಯಿತು. ತಕ್ಷಣವೇ ಆತನನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಯಿತು. ಬಳಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.
ಈ ವೇಳೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಪ್ರವೀಣ ಶೆಟ್ಟಿ, ರಾಜ್ಯದಲ್ಲಿ 25 ಬಿಜೆಪಿ ಲೋಕಸಭೆ ಸದಸ್ಯರನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ಕೇಂದ್ರ ಸರ್ಕಾರದ ಜೊತೆಗೆ ಚರ್ಚೆ ಮಾಡಿ, ಮಹಾರಾಷ್ಟ್ರ ಸರ್ಕಾರವನ್ನು ವಜಾ ಮಾಡಬೇಕು. ಮಹಾರಾಷ್ಟ್ರದಲ್ಲಿ ನೀವು ಏನು ಬೇಕಾದ್ರೂ ಮಾಡಿಕೊಳ್ಳಿ, ಕರ್ನಾಟಕದಲ್ಲಿ ಬಾಲ ಬಿಚ್ಚಲು ಬಂದರೆ ಕನ್ನಡಪರ ಸಂಘಟನೆಗಳು ರಕ್ತಕ್ರಾಂತಿ ಆದರೂ ಬಿಡುವುದಿಲ್ಲ.
ಮರಾಠಿಗರ ಮೇಲೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಪ್ರೀತಿ ಹೊಂದಿದ್ದಾರೆ. ಹೀಗಾಗಿ, ನಮ್ಮ ಸಿಎಂ ಬೊಮ್ಮಾಯಿ ಅವರು ಕೂಡ ಬಂಗಾರಪ್ಪನವರ ಹಾಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದರು.
ಪೊಲೀಸರು ಕರವೇ ಕಾರ್ಯಕರ್ತರ ಮಧ್ಯೆ ಜಟಾಪಟಿ:
ಇನ್ನು ನಾರಾಯಣಗೌಡ ನೇತೃತ್ವದ ಪಾದಯಾತ್ರೆಗೆ ಹಿರೇಬಾಗೆವಾಡಿ ಟೋಲ್ ನಾಕಾದಲ್ಲಿಯೇ ಪೊಲೀಸರು ತಡೆಹಿಡಿದ್ದಾರೆ. ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ಈ ವೇಳೆ ವಾಗ್ವಾದ ನಡೆಯಿತು. ಬಳಿಕ ಪೊಲೀಸರು ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಹಾಗೂ ಎಲ್ಲ ಕಾರ್ಯಕರ್ತರನ್ನು ಬಸ್ ನಲ್ಲಿ ತುಂಬಿಕೊಂಡು ಬೇರೆಡೆಗೆ ಕರೆದೊಯ್ದರು.
ಇದಕ್ಕೂ ಮೊದಲು ನೂರಾರು ಕಾರ್ಯಕರ್ತರು ತಮ್ಮ ವಾಹನಗಳು ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡಿದ್ದರಿಂದ ರಾಷ್ಟ್ರೀಯ ಹೆದ್ದಾರಿ 1ಗಂಟೆಗೂ ಅಧಿಕ ಕಾಲ ಬಂದ್ ಆಗಿತ್ತು.ಇದರಿಂದ ಬೇರೆ ನಗರಗಳಿಗೆ ತೆರಳುವ ಜನರು ಪರದಾಡಿದ್ದಲ್ಲದೇ ಸಂಚಾರ ದಟ್ಟಣೆ ಸಮಸ್ಯೆ ಕೂಡ ಉಂಟಾಗಿತ್ತು.