ಬೆಳಗಾವಿ: ಅಥಣಿ ತಾಲೂಕಿನ ರಸ್ತೆಗಳಿವೆ. ಆದ್ರೆ ಯಾವೊಂದು ರಸ್ತೆಗಳೂ ನೆಟ್ಟಗಿಲ್ಲ, ಸ್ವಲ್ಪ ಮಳೆ ಬಿದ್ದರಂತೂ ರಸ್ತೆ ಕಪ್ಪು ಮಣ್ಣಿನ ಕೆಸರು ಗೆದ್ದೆಯಾಗಿ ಮಾರ್ಪಾಡಾಗುತ್ತದೆ. ಹೀಗಾಗಿ ಇಲ್ಲಿ ನಡೆದಾಡುವುದೇ ದುಸ್ತರವಾಗಿದೆ. ಕಾಲಿಟ್ಟರೆ ಜಾರುವ ಪರಿಸ್ಥಿತಿ ಇದೆ. ದ್ವಿಚಕ್ರ ವಾಹನಗಳನ್ನು ಓಡಿಸುವುದಂತೂ ಇನ್ನೂ ಕಷ್ಟ. ಕೆಲವು ದಿನಗಳ ಹಿಂದೆ ರಸ್ತೆಗಳಿಗೆ ಹಾಕಿದ್ದ ಕಲ್ಲಿನ ಪುಡಿ ಸಂಪೂರ್ಣವಾಗಿ ಹಾಳಾಗಿದ್ದು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಈ ಹಾಳಾದ ರಸ್ತೆಯಲ್ಲೇ ಓಡಾಡಬೇಕಿದೆ.
ಹೌದು, ಜಿಲ್ಲೆಯ ಅಥಣಿ ತಾಲೂಕಿನ ಕೋಕಟನೂರ ದಿಂದ ಪುನರ್ವಸತಿ ಶಿರಹಟ್ಟಿಗೆ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆ ಕೋಕಟನೂರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವುದರಿಂದ ರಸ್ತೆ ರಿಪೇರಿ ಮಾಡದಿರುವುದು ವಿಪರ್ಯಾಸವಾಗಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆ, ಕಾಲೇಜು, ಆಸ್ಪತ್ರೆಗೆ ಹೋಗುವುದು ಒಂದು ಸವಾಲಿನ ಕೆಲಸವೇ ಆಗಿದೆ.
ಡಿಸಿಎಂ ಲಕ್ಷ್ಮಣ್ ಸವದಿ ಅವರಿಗೆ ಈ ರಸ್ತೆ ಅಕ್ಕ ಪಕ್ಕದ ಜನರು ಕೇಳೋದು ಒಂದೇ ಮನವಿ ಆಗಿದೆ. ನಮಗೇನು ಡಾಂಬರು ರಸ್ತೆ ಬೇಡ, ಇರೋದನ್ನೇ ಸರಿ ಮಾಡಿಸಿ, ಇಲ್ಲದಿದ್ದರೆ ಉಪಚುನಾವಣೆಯಲ್ಲಿ ತಕ್ಕ ಪಾಠ ಕಲಿಸ್ತೇವೆ ಅಂತಾ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.