ಬೆಳಗಾವಿ: ಗ್ರಾಹಕರ ಸೋಗಿನಲ್ಲಿ ಬಂದು ಬೆಳಗಾವಿಯ ಬಟ್ಟೆ ಅಂಗಡಿಯೊಂದರಲ್ಲಿ ಬೆಲೆಬಾಳುವ ಸೀರೆ ಕದ್ದೊಯ್ದಿದ್ದ ಅಂತರರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಬೆಳಗಾವಿ ಖಡೇಬಜಾರ್ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶದ ಗುಂಟೂರಿನ ಕಳ್ಳರ ಗ್ಯಾಂಗ್ ಇದಾಗಿದ್ದು, ಮಹಾರಾಷ್ಟ್ರದ ಶಿರಡಿಯಲ್ಲಿ ಆರು ಜನ ಮಹಿಳೆಯರು, ಇಬ್ಬರು ಪುರುಷರು ಸೇರಿ ಒಟ್ಟು 8 ಜನರನ್ನು ಬಂಧಿಸಿ ಪೊಲೀಸರು ಬೆಳಗಾವಿಗೆ ಕರೆತಂದಿದ್ದಾರೆ.
ಖಡೇಬಜಾರ್ನಲ್ಲಿರುವ ವಿರೂಪಾಕ್ಷಿ ಬಟ್ಟೆ ಅಂಗಡಿಯಲ್ಲಿ ನವೆಂಬರ್ 3ರಂದು ಕಳ್ಳತನ ನಡೆದಿತ್ತು. ಎರಡು ತಂಡಗಳಲ್ಲಿ ಅಂಗಡಿಗೆ ಬಂದಿದ್ದ ಆರೋಪಿಗಳು ಅಂದಾಜು 2 ಲಕ್ಷ ರೂ. ಮೌಲ್ಯದ 8 ಕಾಂಚೀವರಂ ಮತ್ತು 1 ಇಳಕಲ್ ಸೀರೆ ಕದ್ದು ಪರಾರಿಯಾಗಿದ್ದರು. ಈ ದೃಶ್ಯ ಸಿಸಿ ಕ್ಯಾಮರಾದಲ್ಲೂ ಸೆರೆಯಾಗಿತ್ತು. ಖಡೇ ಬಜಾರ್ ಪೊಲೀಸ್ ಠಾಣೆಯಲ್ಲಿ ಅಂಗಡಿ ಮಾಲೀಕ ಮಹೇಶ ವಿರೂಪಾಕ್ಷಿ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕಳೆದ ಆಗಸ್ಟ್ ತಿಂಗಳಲ್ಲಿ ಮದುವೆಗೆ ಬಟ್ಟೆ ಖರೀದಿ ಮಾಡುವ ನೆಪದಲ್ಲಿ ಹೋಗಿ ಲಕ್ಷಾಂತರ ರೂಪಾಯಿ ಮೌಲ್ಯದ ಸೀರೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಖದೀಮರ ಗುಂಪನ್ನು ಬೆಂಗಳೂರು ಕೇಂದ್ರ ವಿಭಾಗದ ಪೊಲೀಸರು ಬಂಧಿಸಿದ್ದರು. ಈ ಗ್ಯಾಂಗ್ ಕೂಡ ಆಂಧ್ರಪ್ರದೇಶ ಮೂಲದ್ದಾಗಿದ್ದು ಭರತ್, ಸುನೀತಾ, ಶಿವರಾಮ್ ಪ್ರಸಾದ್, ವೆಂಕಟೇಶ್, ರಾಣಿ, ಶಿವಕುಮಾರ್ ಎಂಬವರನ್ನು ಬಂಧಿಸಲಾಗಿತ್ತು.
ಇದನ್ನೂ ಓದಿ: ಗ್ರಾಹಕರ ಸೋಗಿನಲ್ಲಿ ಬಂದು ಬೆಲೆಬಾಳುವ ಸೀರೆ ಕದ್ದೊಯ್ದ ಕಳ್ಳಿಯರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ..!