ಬೆಳಗಾವಿ: ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕುಂದಾನಗರಿಯಲ್ಲಿ ಅವಾಂತರ ಸೃಷ್ಟಿಗೆ ಕಾರಣವಾಗಿದೆ. ನಗರದ ತಗ್ಗು ಪ್ರದೇಶದ ಬಹುತೇಕ ಮನೆಗಳಿಗೆ ತಡರಾತ್ರಿ ನೀರು ನುಗ್ಗಿದ್ದು, ರಾತ್ರಿಯಿಡೀ ಸಾರ್ವಜನಿಕರು ಪರದಾಡಿದ್ದಾರೆ.
ನಿನ್ನೆ ನಗರ ಸೇರಿ ಜಿಲ್ಲೆಯಾದ್ಯಂತ ಬಿಟ್ಟು ಬಿಡದೆ ಮಳೆ ಸುರಿದಿದ್ದು, ಬೆಳಗಾವಿ ನಗರದ ವಡಗಾಂವನ ಜಾಮಿಯಾ ಗಲ್ಲಿಯ ಐದಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರಾತ್ರಿ ಏಕಾಏಕಿ ನೀರು ನುಗ್ಗಿದ್ದಕ್ಕೆ ನಿವಾಸಿಗಳು ಪರದಾಡಿದ್ದಾರೆ. ಸೋಫಾ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳು ನೀರಲ್ಲಿ ತೇಲುತ್ತಿದ್ದವು. ಮನೆಯೊಳಗೆ ಸೇರಿದ್ದ ಮಳೆ ನೀರನ್ನು ಹೊರ ಹಾಕಲು ಮನೆ ಸದಸ್ಯರು ರಾತ್ರಿಯಿಡೀ ಸರ್ಕಸ್ ಮಾಡಬೇಕಾಯಿತು.
ಮಳೆ ನಿರಂತರವಾಗಿ ಸುರಿಯುತ್ತಿರುವ ಕಾರಣ ತಗ್ಗು ಪ್ರದೇಶದ ಜನರಿಗೆ ಸಮಸ್ಯೆ ತಪ್ಪಿದ್ದಲ್ಲ. ಮಹಾನಗರ ಪಾಲಿಕೆ ಅಧಿಕಾರಿಗಳು ತಗ್ಗು ಪ್ರದೇಶದ ಜನರನ್ನು ತಕ್ಷಣವೇ ಸ್ಥಳಾಂತರಿಸಬೇಕಿದೆ. ಇಲ್ಲದಿದ್ದರೆ ಜನರು ಸಮಸ್ಯೆ ಎದುರಿಸಬೇಕಾಗುತ್ತದೆ.
ಚಿಕ್ಕೋಡಿಯಲ್ಲಿ ಮಳೆಯಿಂದ ಸೇತುವೆ ಜಲಾವೃತ:
ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಚಿಕ್ಕೋಡಿ ಉಪ ವಿಭಾಗದಲ್ಲಿನ ಭೀವಶಿ-ಜತ್ರಾಟ್ ಕೆಳ ಹಂತದ ಸೇತುವೆ ಜಲಾವೃತಗೊಂಡಿದೆ.
ನಿಪ್ಪಾಣಿ ತಾಲೂಕಿನಲ್ಲಿರುವ ವೇದಗಂಗಾ ನದಿಗೆ ಅಡ್ಡಲಾಗಿರುವ ಸೇತುವೆ ಇದಾಗಿದ್ದು, ಹೀಗೆ ಮಳೆ ಮುಂದುವರೆದರೆ ಇನ್ನೂ ಹಲವು ಸೇತುವೆಗಳು ಜಲಾವೃತವಾಗುವ ಸಾಧ್ಯತೆ ಇದೆ. ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಜಿಲ್ಲಾಡಳಿತವು 20ಕ್ಕೂ ಹೆಚ್ಚು ಎನ್‌ಡಿಆರ್‌ಎಫ್ ತಂಡವನ್ನು ನಿಯೋಜನೆಗೊಳಿಸಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ