ಬೆಳಗಾವಿ: ಲಾಕ್ಡೌನ್ ಮಾರ್ಗಸೂಚಿ ಪ್ರಕಾರ ಸೇವಾ ಸಿಂಧು ಆ್ಯಪ್ ಮೂಲಕ ಇ-ಪಾಸ್ ಪಡೆಯದೆ ನಿಯಮ ಉಲ್ಲಂಘಿಸಿ ಮಹಾರಾಷ್ಟ್ರದಿಂದ ಜಿಲ್ಲೆ ಪ್ರವೇಶಿಸಿದ್ದ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ ತಿಳಿಸಿದ್ದಾರೆ.
ನಗರದಲ್ಲಿ ಪತ್ತೆಯಾಗಿರುವ 27 ವರ್ಷದ ಕೊರೊನಾ ಸೋಂಕಿತ ಮಹಿಳೆ (ಪಿ-974)ಯ ಪತಿ, ಸಹೋದರ ಮತ್ತು ವಾಹನ ಚಾಲಕನ ವಿರುದ್ಧ ಜಿಲ್ಲೆಯ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಗರ್ಭಿಣಿಯನ್ನು ಆಕೆಯ ಪತಿ ಮಹಾರಾಷ್ಟ್ರದಿಂದ ಬೆಳಗಾವಿಗೆ ಕರೆ ತಂದಿದ್ದರು. ಇ-ಪಾಸ್ ಪಡೆಯದೆ ಅಕ್ರಮವಾಗಿ ಜಿಲ್ಲೆ ಪ್ರವೇಶಿಸಿದ್ದು ಮಾತ್ರವಲ್ಲದೆ ಈ ಬಗ್ಗೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೂ ಮಾಹಿತಿ ನೀಡಿಲ್ಲ.
ಆದ್ದರಿಂದ ಸೋಂಕಿತ ಮಹಿಳೆಯ ಪತಿ, ಸಹೋದರ ಮತ್ತು ಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸೋಂಕಿತ ಮಹಿಳೆಯನ್ನು ಈಗಾಗಲೇ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದಿರುವ ಹತ್ತು ಜನರನ್ನು ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಇರಿಸಲಾಗಿದೆ. ಸಾರ್ವಜನಿಕರು ಆತಂಕಕ್ಕೆ ಒಳಗಾಗಬಾರದು ಎಂದು ಅವರು ತಿಳಿಸಿದ್ದಾರೆ.