ಚಿಕ್ಕೋಡಿ(ಬೆಳಗಾವಿ): ದೇವರಿಗೆ ಹರಕೆ ತೀರಿಸುವುದು ಎಂದರೆ ಉರುಳು ಸೇವೆ ಮಾಡುವುದು, ಪಾದಯಾತ್ರೆ ಮಾಡುವುದು, ಉಪವಾಸ, ಬರಿಗಾಲಲ್ಲಿ ಬೆಟ್ಟ ಹತ್ತುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೋರ್ವ ಭಕ್ತ ತನ್ನ ಹರಕೆಯನ್ನು ವಿಶಿಷ್ಟವಾಗಿ ತೀರಿಸುವ ಮೂಲಕ ಗಮನ ಸೆಳೆದಿದ್ದಾನೆ. ಈ ಯುವಕ ಬರೋಬ್ಬರಿ 48 ಕಿ.ಮೀ ದೂರ ಟ್ರ್ಯಾಕ್ಟರ್ಗೆ ಟ್ರಾಲಿ ಜೋಡಿಸಿಕೊಂಡು ರಿವರ್ಸ್ ಡ್ರೈವ್ ಮಾಡಿಕೊಂಡು ಹೋಗಿ ಹರಕೆ ತೀರಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದ ನಿವಾಸಿ 25 ವರ್ಷದ ಮಹೇಶ ಅಥಣಿ ಈ ಸಾಹಸ ಮಾಡಿರುವ ಭಕ್ತ. ಶಿರಹಟ್ಟಿ ಗ್ರಾಮದಿಂದ ವಿಜಯಪುರ ಜಿಲ್ಲೆಯ ಕಾಲಜ್ಞಾನಕ್ಕೆ ಹೆಸರುವಾಸಿಯಾದ ಹೊಳೆ ಬಬಲಾದಿ ಶ್ರೀ ಚಕ್ರವರ್ತಿ ಸದಾಶಿವ ಮುತ್ಯಾನ ಮಠದವರಿಗೆ ಸುಮಾರು 9 ತಾಸಿನಲ್ಲಿ ಟ್ರ್ಯಾಕ್ಟರ್ಗೆ ಟ್ರಾಲಿ ಸಮೇತ ಹಿಮ್ಮುಖವಾಗಿ 48 ಕಿ.ಮೀ ದೂರ ಚಲಾಯಿಸಿಕೊಂಡು ದೇವಸ್ಥಾನ ತಲುಪಿದ್ದಾನೆ.
ವೃತ್ತಿಯಲ್ಲಿ ಚಾಲಕ ಆಗಿದ್ದ ಮಹೇಶ ಅಥಣಿ ಹಲವು ವರ್ಷಗಳ ಹಿಂದೆ ಹರಕೆ ಹೊತ್ತುಕೊಂಡಿದ್ದ. ಈ ವರ್ಷ ಸತತವಾಗಿ ಹಿಮ್ಮುಖವಾಗಿ ಡ್ರೈವಿಂಗ್ ಮಾಡಿಕೊಂಡು ಹರಕೆ ತೀರಿಸಿದ್ದಾನೆ. ಹಿಮ್ಮುಖವಾಗಿ ಟ್ರ್ಯಾಕ್ಟರ್ ಎಂಜಿನ್ ಚಲಾಯಿಸುವುದೇ ಕಷ್ಟಕರವಾದ ಕಾರ್ಯ. ಹೀಗಿರುವಾಗ ಟ್ರಾಲಿ ಸಮೇತ ಆತ ಪ್ರಯಾಣ ಮಾಡಿದ್ದಾನೆ. ಯುವಕನ ಈ ಸಾಹಸಕ್ಕೆ ಊರಿನ ಹಾಗೂ ಬಬಲಾದಿ ಮಠಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಬಬಲಾದಿ ಮಠಾಧೀಶ ಸಿದ್ದರಾಮ ಮುತ್ಯಾ ಮಾತನಾಡಿ, ಮಠದ ಶಿರಹಟ್ಟಿ ಓರ್ವ ಭಕ್ತ ಹಿಮ್ಮುಖವಾಗಿ ಕೃಷಿ ಟ್ರ್ಯಾಕ್ಟರ್ ಚಲಾಯಿಸಿಕೊಂಡು ಬಂದು ಸಾಹಸ ಮೆರೆದಿದ್ದಾನೆ. ಈತನ ಪ್ರತಿಭೆಯನ್ನು ಬಬಲಾದಿ ಸದಾಶಿವ ಆಶೀರ್ವದಿಸಿದ್ದಾರೆ. ನಿರಂತರವಾಗಿ ಹಿಮ್ಮುಖವಾಗಿ ಚಲಿಸುವುದು ಕಠಿಣ, ಆದರೂ ಈತ ಟ್ರ್ಯಾಕ್ಟರ್ ಮುಖಾಂತರ ಬಂದು ತನ್ನ ಭಕ್ತಿಯನ್ನು ಅರ್ಪಣೆ ಮಾಡಿದ್ದಾನೆ. ದೇವರು ಆಶೀರ್ವದಿಸಲಿ ಎಂದು ಶುಭ ಕೋರಿದರು.
ಭಕ್ತ ಮಹೇಶ್ ಅಥಣಿ ಮಾತನಾಡಿ, ಹಲವು ವರ್ಷಗಳಿಂದ ಬಬಲಾದಿಗೆ ಹಿಮ್ಮುಖವಾಗಿ ಟ್ರ್ಯಾಕ್ಟರ್ ಚಲಾಯಿಸಬೇಕೆಂಬ ಆಸೆ ನನ್ನಲ್ಲಿತ್ತು, ಇವತ್ತು ಆಸೆ ಈಡೇರಿದೆ. ನಾನು ವೃತ್ತಿಯಲ್ಲಿ ಚಾಲಕನಾಗಿದ್ದರಿಂದ ದೇವರಿಗೆ ಈ ಮುಖಾಂತರ ನನ್ನ ಭಕ್ತಿಯನ್ನು ಅರ್ಪಣೆ ಮಾಡಿದ್ದೇನೆ. ಗ್ರಾಮದಿಂದ ಮುಂಜಾನೆ 9 ಗಂಟೆಗೆ ಸ್ಥಳವನ್ನು ಬಿಡಲಾಗಿತ್ತು. ಸಂಜೆ 6 ಗಂಟೆಗೆ ಮಠವನ್ನು ತಲುಪಿದ್ದೇವೆ. ಯಾವುದೇ ತೊಂದರೆಯಾಗದೇ ನಾವು ಮಠವನ್ನು ತಲುಪಿದ್ದು ಖುಷಿಯಾಗಿದೆ ಎಂದು ಹೇಳಿದ.
ಇದನ್ನೂ ಓದಿ: ಹುಬ್ಬಳ್ಳಿ: 75 ಕಿ.ಮೀ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸಿ ಯಲ್ಲಮ್ಮ ದೇವಿಗೆ ಹರಕೆ ತೀರಿಸಿದ ಯುವಕ