ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಕೆಲ ತಾಲೂಕುಗಳಲ್ಲಿ 2ನೇ ಹಂತದಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಚುನಾವಣೆಯ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ಎಂ.ಜಿ ಹಿರೇಮಠ ಅವರು ಪರಿಶೀಲಿಸಿದರು.
ಜಿಲ್ಲೆಯ ಅಥಣಿ, ಕಾಗವಾಡ, ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲ್ಲೂಕುಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಸಿದ್ಧತೆಗಳ ಕುರಿತು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಚುನಾವಣೆಗೆ ನಿಯೋಜಿತಗೊಂಡು ತರಬೇತಿ ಪಡೆಯುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಜೊತೆ ಮಾತನಾಡಿದ ಅವರು, ಚುನಾವಣಾ ಪ್ರಕ್ರಿಯೆ ಸುಸೂತ್ರವಾಗಿ ನಡೆಯುವಂತೆ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಚುನಾವಣೆ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ತುರುಸಿನ ಪೈಪೋಟಿ ಕಂಡು ಬರುವುದರಿಂದ ಯಾವುದೇ ಅಕ್ರಮಗಳಿಗೆ ಅವಕಾಶ ನೀಡದಂತೆ ಕ್ರಮ ಕೈಗೊಳ್ಳಬೇಕು. ಚುನಾವಣಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ನ್ಯಾಯಸಮ್ಮತ ಮತ್ತು ಪಾರ್ದರ್ಶಕ ಚುನಾವಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯತಿ ಚುನಾವಣೆಗೆ ಮೊದಲ ಹಂತದಲ್ಲಿ ಡಿ.22 ರಂದು ಹಾಗೂ ಎರಡನೇ ಹಂತದಲ್ಲಿ ಡಿ.27 ರಂದು ಮತದಾನ ನಡೆಯಲಿದೆ. ಚುನಾವಣಾ ಪ್ರಕ್ರಿಯೆಗಳು ಮತ್ತು ನಿಯಮಾವಳಿ ಪಾಲನೆಗೆ ಸಂಬಂಧಿಸಿದಂತೆ ತರಬೇತಿ ನೀಡಲಾಗಿದೆ. ಅಧಿಕಾರಿಗಳಿಗೆ ಸಂದೇಹಗಳು ಬಂದರೆ ಕೂಡಲೇ ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಅಗತ್ಯ ಮಾರ್ಗದರ್ಶನ ಪಡೆದುಕೊಳ್ಳಬೇಕು ಎಂದು ಡಿಸಿ ಹಿರೇಮಠ ತಿಳಿಸಿದರು.