ಅಥಣಿ: ಕೊರೊನಾ ಸೋಂಕಿತರು ಪಟ್ಟಣದ ಹೊರವಲಯದಲ್ಲಿರುವ ರಾಣಿ ಚೆನ್ನಮ್ಮ ವಸತಿ ಶಾಲೆಯ ಕೊರೊನಾ ಕಾಳಜಿ ಕೇಂದ್ರಕ್ಕೆ ಬರಲು ಹಿಂದೇಟು ಹಾಕಿದ್ದು, ಮನೆಯಲ್ಲೇ ಕ್ವಾರಂಟೈನ್ ಆಗುವುದಾಗಿ ಪಟ್ಟು ಹಿಡಿದ ಘಟನೆ ನಡೆದಿದೆ.
ಅಥಣಿ ತಾಲೂಕಿನಲ್ಲಿ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಜನರನ್ನು ಕ್ವಾರಂಟೈನ್ ಮಾಡಲು ಸ್ಥಳಾವಕಾಶದ ಕೊರತೆ ಎದುರಾಗುವ ಸಾಧ್ಯತೆ ಇದೆ. ಈ ನಡುವೆ, ಅಥಣಿ ಪಟ್ಟಣದ ಹಲವು ಪಾಸಿಟಿವ್ ಸೋಂಕಿತರ ಮೊಬೈಲ್ ಸ್ವಿಚ್ ಆಫ್ ಆಗುವ ಮೂಲಕ ಸಾರ್ವಜನಿಕ ವಲಯದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.
ಶನಿವಾರ ಬೆಳಿಗ್ಗೆ 8 ಗಂಟೆಗೆ ಸೋಂಕಿತರ ಪಟ್ಟಿ ಲಭ್ಯವಾಗಿದ್ದು, ಸಂಜೆ 8ಗಂಟೆ ಆದರೂ ಕೂಡ ಬೆರಳೆಣಿಕೆಯ ಜನರನ್ನು ಹೊರತುಪಡಿಸಿ ಬಹುತೇಕರು ಕ್ವಾರಂಟೈನ್ ಆಗಲು ಹಿಂಜರಿಯುತ್ತಿದ್ದರು. ಪೊಲೀಸರ ಸಹಕಾರದೊಂದಿಗೆ ಸೋಂಕಿತರ ಮನೆಗೆ ತೆರಳಿದ ಅಧಿಕಾರಿಗಳು ಅವರನ್ನು ರಾಣಿ ಚೆನ್ನಮ್ಮ ವಸತಿ ಶಾಲೆಯ ಕಾಳಜಿ ಕೇಂದ್ರಕ್ಕೆ ಕರೆದೊಯ್ದಿದ್ದಾರೆ.
ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದೌಡಾಯಿಸಿದ ಚಿಕ್ಕೋಡಿ ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ ಹೋಮ್ ಕ್ವಾರಂಟೈನ್ ವಿಳಂಬವಾದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿ, ಘಟನೆ ಬಗ್ಗೆ ಮಾಹಿತಿ ಪಡೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.