ಬೆಳಗಾವಿ: ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದ್ದು, ಕೈ ನಾಯಕನೋರ್ವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎದುರು ಅಸಮಾಧಾನ ತೋಡಿಕೊಂಡ ಘಟನೆ ನಗರದ ಪ್ರವಾಸಿ ಮಂದಿರದಲ್ಲಿ ನಡೆದಿದೆ.
ಕಳೆದ ಚುನಾವಣೆಯಲ್ಲಿ ರಾಯಭಾಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರದೀಪ್ ಕುಮಾರ್ ಮಾಳಗಿ ಇಂದು ಡಿಕೆಶಿ ಭೇಟಿಯಾಗಿ ಈ ಬಗ್ಗೆ ದೂರು ಸಲ್ಲಿಸಿದ್ದು, ರಾಯಭಾಗ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೌಡ ಪಾಟೀಲ್ ಈ ಪೈಕಿ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ದಾಖಲೆ ಸಮೇತ ಡಿಕೆಶಿಗೆ ದೂರು ನೀಡಿದ್ದಾರೆ.
ಇನ್ನು ಇದೇ ವೇಳೆ ನಿನ್ನೆ ಕಾಂಗ್ರೆಸ್ ಭವನ ಉದ್ಘಾಟನೆ ಹಾಗೂ ಕಾರ್ಯಕರ್ತರ ಸಭೆಗೆ ಏಕೆ ಬರಲಿಲ್ಲ ಎಂದು ಪ್ರದೀಪಕುಮಾರ್ ಅವರನ್ನು ಡಿಕೆಶಿ ಪ್ರಶ್ನಿದ್ದಾರೆ. ಇದಕ್ಕೆ ಉತ್ತರ ನೀಡಿದ ಪ್ರದೀಪ್ ಕುಮಾರ್, ಕೆಲ ಕಾರಣಗಳಿಂದ ಸಭೆಗೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ಸಮಜಾಯಿಶಿ ನೀಡಿದ್ದಾರೆ.