ಬೆಳಗಾವಿ: ಪಕ್ಷ ಸಂಘಟನೆ ಹಾಗೂ ಮುಂಬರುವ ಚುನಾವಣೆ ಹಿನ್ನೆಲೆ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇಂದು ಸಮಾಲೋಚನೆ ಸಭೆ ನಡೆಸಲಾಗುತ್ತಿದೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ನಗರದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಅಮಿತ್ ಶಾ ಹಾಗೂ ರಾಜ್ಯದ ಮುಖ್ಯಮಂತ್ರಿಗಳು ಇಂದು ನಗರದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಆಗಮಿಸಲಿದ್ದಾರೆ.
ಈಗಾಗಲೇ ಬೆಳಗಾವಿ ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬಾಗಲಕೋಟೆಗೆ ಸಮಾರಂಭಕ್ಕೆ ತೆರಳಿದ್ದಾರೆ. ಮರಳಿ ಮಧ್ಯಾಹ್ನ 1.30 ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ. ನಂತರ ನಗರದ ಪ್ರವಾಸಿ ಮಂದಿರದಲ್ಲಿ ಊಟ ಮುಗಿಸಿಕೊಂಡು ಅಲ್ಲಿಂದ ನೇರವಾಗಿ ದಿ.ಸುರೇಶ ಅಂಗಡಿ ಮನೆಗೆ ಭೇಟಿ ನೀಡಿ, ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಲಿದ್ದಾರೆ ಎಂದರು.
ಇನ್ನು ಸಂಜೆ 4 ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸೇವಕ್ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಬಳಿಕ ಕೆಎಲ್ಇ ಸಂಸ್ಥೆಯಲ್ಲಿ ಲ್ಯಾಬ್ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಜಿಗ್ರಿ ಹಾಲ್ನಲ್ಲಿ ಜಿಲ್ಲೆಯ ಬಿಜೆಪಿ ಮುಖಂಡರು, ಮಂತ್ರಿಗಳು ಹಾಗೂ ಅಮಿತ್ ಶಾ ಅವರೊಂದಿಗೆ ಸಭೆ ನಡೆಯಲಿದೆ. ಆ ಸಭೆಯಲ್ಲಿ ಪಕ್ಷ ಸಂಘಟನೆ ಕುರಿತು ಚರ್ಚೆ ಮಾಡಲಾಗುವುದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಮ ಸ್ವರಾಜ್ಯ ಸಮಾವೇಶಗಳನ್ನು ಮಾಡಿದ್ದರಿಂದ ಹಿಂದೆಂದು ಕಾಣದ ರೀತಿಯಲ್ಲಿ ಗ್ರಾಮ ಪಂಚಾಯತ್ ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಬೆಳಗಾವಿಯಲ್ಲಿ ಅತಿ ಹೆಚ್ಚು ಗ್ರಾಮ ಪಂಚಾಯತ್ ಬೆಂಬಲಿತ ಅಭ್ಯರ್ಥಿಗಳು ಗೆದ್ದಿದ್ದಾರೆ. ಹೀಗಾಗಿ ಗ್ರಾಪಂ ಸದಸ್ಯರ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವರಿಗೆ ಅಭಿನಂದನೆ ಸಲ್ಲಿಸಲು ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.