ಬೆಳಗಾವಿ: ಸಿಲಿಂಡರ್ ಸ್ಫೋಟದಿಂದ ತೀವ್ರವಾಗಿ ಗಾಯಗೊಂಡಿದ್ದ ಮೂವರ ಪೈಕಿ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ರಾಜಶ್ರೀ ಅಶೋಕ ನಿರ್ವಾಣಿ (42) ಮತರು.
ಗೋಕಾಕ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ಭಾನುವಾರ ಸಿಲಿಂಡರ್ ಸ್ಫೋಟಗೊಂಡಿತ್ತು. ಘಟನೆಯಲ್ಲಿ 9 ತಿಂಗಳ ಹಸುಗೂಸು ಸೇರಿ ಒಂದೇ ಕುಟುಂಬದ 7 ಮಂದಿ ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಈ ಮೂವರನ್ನು ಕೆಎಲ್ಇ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಕುಟುಂಬಸ್ಥರಿಗೆ ಮಹಿಳೆಯ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಇನ್ನಿಬ್ಬರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮನೆ ಸಂಪೂರ್ಣ ಭಸ್ಮ: ಅಡುಗೆ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡು ಮನೆ ಸಂಪೂರ್ಣ ಸುಟ್ಟು ಕರಕಲಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಕುಮಟಾದ ಹೆಗಡೆ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ನಡೆದಿತ್ತು. ಹೆಗಡೆ ಗ್ರಾಮದ ನಾರಾಯಣ ಮುಕ್ರಿ ಅವರ ಮನೆಯಲ್ಲಿ ಅವಘಡ ಸಂಭವಿಸಿದ್ದು, ಅಪಾರ ಹಾನಿಯುಂಟಾಗಿದೆ.
ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡಿದೆ. ಮನೆಯಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡಿದ್ದರಿಂದ ಬೆಂಕಿ ತಗುಲಿ ಸಂಪೂರ್ಣವಾಗಿ ಹಂಚಿನ ಮನೆ ಹಾನಿಗೆ ಒಳಗಾಗಿದೆ. ಮನೆಯಲ್ಲಿ ಯಾರೂ ಇಲ್ಲದೇ ಇದ್ದುದರಿಂದ ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರು.
ಮನೆಯಲ್ಲಿದ್ದ ಬಟ್ಟೆ ಸೇರಿದಂತೆ ಕಾಳು ಕಡಿ, ವಿವಿಧ ವಸ್ತುಗಳು ಸುಟ್ಟು ಕರಕಲಾಗಿದ್ದವು. ಈ ಘಟನೆಯಿಂದ ನಾರಾಯಣ ಮುಕ್ರಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಬೆಂಕಿ ತಗುಲಿರುವುದನ್ನು ನೋಡಿದ ಅಕ್ಕ ಪಕ್ಕದ ಮನೆಯವರು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು.
ಇದನ್ನೂಓದಿ: ಕಾರವಾರ: ಲಾರಿ ಹರಿದು ಶಿಕ್ಷಕ ಸ್ಥಳದಲ್ಲೇ ಸಾವು; ಜನರಿಂದ ಆಕ್ರೋಶ