ಬೆಳಗಾವಿ: ಜಿಲ್ಲೆಯ ನಿಪ್ಪಾಣಿ ತಾಲೂಕಿನ ಬೋರಗಾಂವ್ ಗ್ರಾಮದಲ್ಲಿ ನಕಲಿ ನೋಟ್ ಪ್ರಿಂಟ್ ಮಾಡುತ್ತಿದ್ದ, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೋರಗಾವ ಗ್ರಾಮದ ವಿಜಯ್ ಬೆಡಕಿಹಾಳ, ಅಕ್ಷಯ್ ವಡ್ಡರ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವರು ನಕಲಿ ನೋಟುಗಳನ್ನು ಪ್ರಿಂಟ್ ಮಾಡಿ, ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದರು. ಬಂಧಿತರಿಂದ 7 ಸಾವಿರ ರೂ. ನಕಲಿ ನೋಟು, ಪ್ರಿಂಟರ್ ಇತರ ಸಾಮಗ್ರಿ ಜಪ್ತಿ ಮಾಡಿಕೊಳ್ಳಲಾಗಿದೆ.
ಸವದತ್ತಿ ತಾಲೂಕಿನ ಮುರಗೋಡದ ಬಾರ್‌ವೊಂದರಲ್ಲಿ ಇಬ್ಬರು ಯುವಕರು ನಕಲಿ ನೋಟು ಚಲಾವಣೆಗೆ ಪ್ರಯತ್ನಿಸಿದ್ದರು. ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬೋರಗಾವದಲ್ಲಿ ನಕಲಿ ನೋಟು ಪಡೆದ ಬಗ್ಗೆ ಯುವಕರು ಮುರಗೋಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಮುರಗೋಡ ಹಾಗೂ ಸದಲಗಾ ಠಾಣೆ ಪೊಲೀಸರು ಜಂಟಿಯಾಗಿ ಬೋರಗಾವದಲ್ಲಿ ನಕಲಿ ನೋಟು ಪ್ರಿಂಟ್ ಮಾಡುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದಾಗ, ಆರೋಪಿತರು ಮನೆಯಲ್ಲಿದ್ದ ಪ್ರಿಂಟರ್ ಸುಡಲು ಯತ್ನಿಸಿದ್ದಾರೆ.
ಐದು ಸಾವಿರ ರೂಪಾಯಿ ಅಸಲಿ ನೋಟು ಪಡೆದು 10 ಸಾವಿರ ನಕಲಿ ನೋಟುಗಳನ್ನು ಆರೋಪಿತರು ನೀಡುತ್ತಿದ್ದರು. ಇದರ ಹಿಂದೆ ವ್ಯವಸ್ಥಿತ ಜಾಲ ಇರುವ ಶಂಕೆ ವ್ಯಕ್ತವಾಗಿದ್ದು, ಪ್ರಮುಖ ಆರೋಪಿಗಾಗಿ ಮುರಗೋಡ ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ. ನಕಲಿ ನೋಟು ಹಾವಳಿಗೆ ಗಡಿ ಜಿಲ್ಲೆ ಬೆಚ್ಚಿ ಬಿದ್ದಿದೆ.