ಬೆಳಗಾವಿ : ಕೋವಿಡ್-19 ಹಿನ್ನೆಲೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅಗಸರು ಮತ್ತು ಕ್ಷೌರಿಕ ವೃತ್ತಿದಾರರಿಗೆ ಸರ್ಕಾರ ಘೋಷಿಸಿರುವ ಐದು ಸಾವಿರ ರೂಪಾಯಿ ನೆರವನ್ನು ಯಾವುದೇ ವಿಳಂಬವಿಲ್ಲದೇ, ಅರ್ಹರಿಗೆ ತಕ್ಷಣ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಎಸ್ ಬಿ ಬೊಮ್ಮನಹಳ್ಳಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರದ ನೆರವು ಪಡೆಯಲು ಅಗತ್ಯವಿರುವ ವೃತ್ತಿ ದೃಢೀಕರಣ ಪತ್ರವನ್ನು ನೀಡಲು ವಿನಾಕಾರಣ ವಿಳಂಬ ಮಾಡುವ ಸ್ಥಳೀಯ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸರ್ಕಾರದ ನೆರವು ಪಡೆಯಲು ವೃತ್ತಿ ಲೈಸೆನ್ಸ್ ಖಡ್ಡಾಯವಲ್ಲ. ಸೇವಾಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಜೂನ್ 30 ಕಡೆಯ ದಿನವಾಗಿದೆ. ವೃತ್ತಿಯ ಲೈಸೆನ್ಸ್ ಇಲ್ಲವೆಂಬ ಕಾರಣಕ್ಕೆ ವೃತ್ತಿಯ ದೃಢೀಕರಣ ಪತ್ರ ನೀಡಲು ಯಾವುದೇ ಕಾರಣಕ್ಕೂ ನಿರಾಕರಿಸಬಾರದು. ಸೇವಾಸಿಂಧು ಪೋರ್ಟಲ್‌ನಲ್ಲೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕಿರುವುದರಿಂದ, ಮುದ್ರಿತ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಬಾರದು ಎಂದರು.
ಉಪಕಾರ್ಮಿಕ ಆಯುಕ್ತ ವೆಂಕಟೇಶ ಶಿಂಧಿಹಟ್ಟಿ ಮಾತನಾಡಿ, ಸರ್ಕಾರದ ನೆರವು ಪಡೆಯಲು ಕಡ್ಡಾಯವಾಗಿ ಸೇವಾಸಿಂಧು ಮೂಲಕ ಅರ್ಜಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಈವರೆಗೆ 1,226 ಕ್ಷೌರಿಕರು ಮತ್ತು 311 ಅಗಸರು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಉಳಿದವರು ಕೂಡಾ ಅಗತ್ಯ ದಾಖಲೆಗಳೊಂದಿಗೆ ಜೂನ್ 30ರೊಳಗೆ ಅರ್ಜಿ ಸಲ್ಲಿಸಬೇಕು ಎಂದರು.
ನೆರವು ಯಾರಿಗೆ? ಅರ್ಜಿ ಸಲ್ಲಿಸುವುದು ಹೇಗೆ?: ಅಗಸರು ಮತ್ತು ಕ್ಷೌರಿಕ ವೃತ್ತಿಯಲ್ಲಿ ಇರುವವರು ಒಂದು ಬಾರಿ ಐದು ಸಾವಿರ ನೆರವು ಪಡೆಯಬಹುದು. ವಯೋಮಿತಿ 18 ರಿಂದ 65 ವರ್ಷವಾಗಿದೆ. ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಪರಿಹಾರವನ್ನು ಪಡೆಯಬಹುದು. ಕರ್ನಾಟಕದಲ್ಲಿ ಇರುವ ಹೊರ ರಾಜ್ಯದ ಕಾರ್ಮಿಕರು ಅರ್ಹರು, ಬಿಪಿಎಲ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು, ಆಧಾರ್ ಸಂಖ್ಯೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಹೊಂದಿರುವುದು ಖಡ್ಡಾಯ. ವೃತ್ತಿ ನಿರ್ವಹಿಸುತ್ತಿರುವ ಕುರಿತು ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರದೊಂದಿಗೆ sevasindhu.Karnataka. gov.in ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ/ತಾಲೂಕು ಕಾರ್ಮಿಕ ಅಧಿಕಾರಿಗಳನ್ನು ಸಂಪರ್ಕಿಸಬೇಕು.