ಬೆಂಗಳೂರು : ಹುಟ್ಟು ಹೋರಾಟಗಾರ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಐದು ದಶಕಗಳ ರಾಜಕೀಯ ಜೀವನದಲ್ಲಿ ಪಕ್ಷ ಹಾಗೂ ಸರ್ಕಾರದಲ್ಲಿ ಮುಖ್ಯಸ್ಥರ ಜವಾಬ್ದಾರಿ ನಿರ್ವಹಿಸಿದ್ದಾರೆ. ಹೋರಾಟವನ್ನೇ ಬದುಕಾಗಿಸಿಕೊಂಡ ನಾಯಕ 50 ವರ್ಷದಲ್ಲಿ ಸೋತಿದ್ದು ಒಮ್ಮೆ ಮಾತ್ರ. ಸೋಲಿಲ್ಲದ ಸರದಾರನಾಗಿ ಮೆರೆದಿರುವ ಯಡಿಯೂರಪ್ಪ ಜೀವನದ ಏಳು-ಬೀಳುಗಳ ಕುರಿತ ಒಂದು ವರದಿ ಇಲ್ಲಿದೆ.
ಪಕ್ಷ ರಾಜಕಾರಣ : ಕಾಲೇಜು ದಿನಗಳಲ್ಲೇ ಆರ್‌ಎಸ್‌ಎಸ್ ಕಾರ್ಯಕರ್ತನಾಗಿ ಸಮಾಜಮುಖಿ ಚಟುವಟಿಕೆಯತ್ತ ಹೆಜ್ಜೆ ಇರಿಸಿದ್ದ ಬಿ ಎಸ್ ಯಡಿಯೂರಪ್ಪ 1972ರಲ್ಲಿ ಶಿಕಾರಿಪುರ ಜನ ಸಂಘದ ತಾಲೂಕು ಅಧ್ಯಕ್ಷರಾಗಿ ರಾಜಕೀಯ ಪ್ರವೇಶ ಮಾಡಿದರು. 1980ರಲ್ಲಿ ಶಿಕಾರಿಪುರ ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ಅಲಂಕರಿಸಿ ಪಕ್ಷ ಸಂಘಟನೆ ಮಾಡಿದರು. ಇದರ ಫಲವಾಗಿ 1985ರಲ್ಲಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸ್ಥಾನ ಲಭಿಸಿತು.
ಜಿಲ್ಲಾಧ್ಯಕ್ಷರಾಗಿ ಸಂಘಟನಾ ಚತುರತೆಯಿಂದ ಕಾರ್ಯನಿರ್ವಹಿಸಿದ ಪರಿಣಾಮ 1988ರಲ್ಲಿಯೇ ರಾಜ್ಯಾಧ್ಯಕ್ಷ ಸ್ಥಾನ ಒಲಿದು ಬಂದಿತ್ತು. ರಾಜ್ಯಾಧ್ಯಕ್ಷ ಹುದ್ದೆಯ ಜವಾಬ್ದಾರಿ ನಿರ್ವಹಿಸಿದ ನಂತರ ಬಿಜೆಪಿ ವರಿಷ್ಠರು ರಾಷ್ಟ್ರೀಯ ಘಟಕಕ್ಕೆ ಬಡ್ತಿ ನೀಡಿ 1992ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯನ್ನಾಗಿ ನೇಮಿಸಿ ರಾಷ್ಟ್ರಮಟ್ಟದಲ್ಲಿ ಕೆಲಸ ಮಾಡುವ ಜವಾಬ್ದಾರಿ ನಿರ್ವಹಿಸಿದರು.
1999ರಲ್ಲಿ ಮತ್ತೆ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡ ಯಡಿಯೂರಪ್ಪ ಪಕ್ಷವನ್ನು ಅಧಿಕಾರಕ್ಕೆ ತರುವವರೆಗೂ ಹಗಲಿರುಳು ಶ್ರಮಿಸಿದರು. ಆದರೆ, ಅಧಿಕಾರಕ್ಕೆ ಬಂದ ನಂತರ ನಡೆದ ರಾಜಕೀಯ ವಿದ್ಯಮಾನಗಳಿಂದ ಬೇಸತ್ತ ಯಡಿಯೂರಪ್ಪ ಕಟ್ಟಿ ಬೆಳೆಸಿದ ಪಕ್ಷವನ್ನು 2012ರಲ್ಲಿ ತ್ಯಜಿಸಿದರು. ಕೆಜೆಪಿ ಹೆಸರಿನಲ್ಲಿ ಪ್ರಾದೇಶಿಕ ಪಕ್ಷವನ್ನು ಕಟ್ಟಿ 2013ರ ಚುನಾವಣೆ ಎದುರಿಸಿದರು. ಪಕ್ಷ ದಯನೀಯ ಸೋಲು ಕಂಡರೂ ಬಿಜೆಪಿಗೆ ಪಾಠ ಕಲಿಸುವಲ್ಲಿ ಸಫಲರಾದರು.
ಇದರ ಪರಿಣಾಮ 2014ರ ಲೋಕಸಭಾ ಚುನಾವಣೆ ವೇಳೆಗೆ ಮರಳಿ ಬಿಜೆಪಿ ಸೇರಿದ ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾದರು. ಅವರ ಅಧ್ಯಕ್ಷತೆಯಲ್ಲಿ 2018ರ ಚುನಾವಣೆಯನ್ನು ಎದುರಿಸಿದ್ದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವಂತೆ ಮಾಡಿದರು. ನಂತರ ಮುಖ್ಯಮಂತ್ರಿ ಆದ ಕಾರಣಕ್ಕೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಚುನಾವಣಾ ರಾಜಕಾರಣ : ಇನ್ನು, ಚುನಾವಣಾ ರಾಜಕಾರಣದಲ್ಲಿ ಯಡಿಯೂರಪ್ಪ ನಡೆದದ್ದೇ ಹಾದಿ ಎನ್ನುವಂತಾಗಿದೆ. ಈವರೆಗೂ ಕೇವಲ ಒಂದೇ ಒಂದು ಬಾರಿ ಮಾತ್ರ ಪರಾಜಿತಗೊಂಡಿರುವ ಯಡಿಯೂರಪ್ಪ ಉಳಿದಂತೆ ಎಲ್ಲ ಚುನಾವಣೆಗಳಲ್ಲಿಯೂ ಸತತವಾಗಿ ಗೆಲುವು ಸಾಧಿಸುತ್ತಲೇ ಬಂದಿದ್ದಾರೆ. 1983ರಲ್ಲಿ ಮೊದಲ ಬಾರಿ ವಿಧಾನಸಭೆಗೆ ಆಯ್ಕೆಯಾದ ಯಡಿಯೂರಪ್ಪ ನಂತರ 1985,1989,1994,2004,2008,2013,2018ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. 1999ರಲ್ಲಿ ಮಾತ್ರ ಒಮ್ಮೆ ಸೋತಿದ್ದಾರೆ. 2013ರಲ್ಲಿ ಕೆಜೆಪಿಯಿಂದ ಗೆದ್ದಿದ್ದರೆ ಉಳಿದಂತೆ ಬಿಜೆಪಿಯಿಂದಲೇ ಗೆಲುವು ಸಾಧಿಸಿದ್ದಾರೆ.
2014ರಲ್ಲಿ ಶಿವಮೊಗ್ಗ ಲೋಕಸಭೆ ಚುನಾವಣೆಗೆ ನಿಂತು ಗೆಲ್ಲುವ ಮೂಲಕ ದೆಹಲಿ ರಾಜಕೀಯವನ್ನೂ ಪ್ರವೇಶಿಸಿದ್ದ ಯಡಿಯೂರಪ್ಪ, ನಂತರ 2018ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕಾರಣಕ್ಕೆ ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಪುತ್ರನನ್ನ ನಿಲ್ಲಿಸಿ ಗೆಲ್ಲಿಸಿಕೊಳ್ಳುವ ಮೂಲಕ ರಾಜಕೀಯ ಮೇಲುಗೈ ಸಾಧಿಸಿದರು. ಐದು ದಶಕದ ಸುದೀರ್ಘ ಚುನಾವಣಾ ರಾಜಕೀಯದಲ್ಲಿ ಕೇವಲ ಒಂದು ಸೋಲು ಹೊರತುಪಡಿಸಿದರೆ ಗೆಲುವಿನ ಸರದಾರನಂತೆಯೇ ಮೆರೆದಿದ್ದಾರೆ.
ಸರ್ಕಾರದಲ್ಲಿ ಯಡಿಯೂರಪ್ಪ : ವಿಧಾನಸಭೆ ಪ್ರತಿಪಕ್ಷ ನಾಯಕ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ, ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಸರ್ಕಾರದ ಮಟ್ಟದಲ್ಲಿ ಸಾಂವಿಧಾನಿಕ ಹುದ್ದೆಯನ್ನು ನಿರ್ವಹಿಸಿದ್ದಾರೆ. 1994ರಲ್ಲಿ ಕಾಂಗ್ರೆಸ್ ನೆಲಕಚ್ಚಿ ಜನತಾದಳ ಅಧಿಕಾರಕ್ಕೆ ಬಂದಾಗ ಪ್ರತಿಪಕ್ಷ ಸ್ಥಾನ ಬಿಜೆಪಿಗೆ ಲಭಿಸಿತ್ತು. ಆಗ ಮೊದಲ ಬಾರಿ ಯಡಿಯೂರಪ್ಪ ಪ್ರತಿಪಕ್ಷ ನಾಯಕರಾದರು. 1999ರಲ್ಲಿ ಪರಾಜಿತಗೊಂಡ ಯಡಿಯೂರಪ್ಪ ಅವರನ್ನು ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿ 2000ರಲ್ಲಿ ಪರಿಷತ್ ಪ್ರತಿಪಕ್ಷ ನಾಯಕನ ಜವಾಬ್ದಾರಿ ನೀಡಲಾಯಿತು. ನಂತರ
2004ರಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಅಗತ್ಯ ಬಹುಮತ ಬಾರದ ಕಾರಣ ಪ್ರತಿಪಕ್ಷ ಸ್ಥಾನದಲ್ಲಿ ಬಿಜೆಪಿ ಕೂರಬೇಕಾಯಿತು. ಆಗ 2ನೇ ಬಾರಿ ವಿಧಾನಸಭೆ ಪ್ರತಿಪಕ್ಷ ನಾಯಕನ ಜವಾಬ್ದಾರಿಯನ್ನು ಯಡಿಯೂರಪ್ಪ ನಿರ್ವಹಿಸಿದರು. 20 ತಿಂಗಳ ಅವಧಿಯಲ್ಲಿ ಬದಲಾದ ರಾಜಕೀಯ ಕ್ಷಿಪ್ರ ಕ್ರಾಂತಿಯಿಂದಾಗಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಯಿತು.
ಯಡಿಯೂರಪ್ಪ ಮೊದಲ ಬಾರಿ ಸಂಪುಟದಲ್ಲಿ ಸ್ಥಾನ ಪಡೆದು ಮೊದಲ ಬಾರಿಗೇ ಉಪ ಮುಖ್ಯಮಂತ್ರಿಯಾದರು. 20-20 ತಿಂಗಳ ಒಪ್ಪಂದದಂತೆ ಎರಡನೇ ಅವಧಿಗೆ ಮೊದಲ ಬಾರಿ 2008ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಆದರೆ, ಕೇವಲ ಏಳು ದಿನದಲ್ಲೇ ಮೈತ್ರಿ ಪಕ್ಷ ಜೆಡಿಎಸ್ ಬೆಂಬಲ ಸಿಗದೆ ರಾಜೀನಾಮೆ ನೀಡಿದರು.
ನಂತರ 2008ರಲ್ಲೇ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ 110 ಸ್ಥಾನ ಗಳಿಸಿದ ಬಿಜೆಪಿ ಪಕ್ಷೇತರ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸಿತು. ಯಡಿಯೂರಪ್ಪ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಆದರೆ, 2011ರ ಜುಲೈನಲ್ಲಿ ಅಕ್ರಮ ಗಣಿಗಾರಿಕೆ ಆರೋಪ ಕುರಿತು ಲೋಕಾಯುಕ್ತ ವರದಿಯಲ್ಲಿ ಹೆಸರು ಬಂದಿದ್ದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು.
2018ರಲ್ಲಿ ನಡೆದ ಚುನಾವಣೆಯಲ್ಲಿ 104 ಸ್ಥಾನ ಪಡೆದ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಮತ್ತೆ ಹೊರ ಹೊಮ್ಮಿತು. ಬಹುಮತ ಇಲ್ಲದೇ ಇದ್ದರೂ ಯಡಿಯೂರಪ್ಪ ತರಾತುರಿಯಲ್ಲಿ ಪ್ರಮಾಣವಚನ ಸ್ವೀಕಾರ ಮಾಡಿದರು. ಆದರೆ, ಬಹುಮತ ಸಾಬೀತುಪಡಿಸಲು ಸಾಧ್ಯವಾಗದ ಕಾರಣ ಕೇವಲ ಮೂರೇ ದಿನದಲ್ಲಿ ರಾಜೀನಾಮೆ ನೀಡಿದರು. ಆದರೂ ಮೈತ್ರಿ ಸರ್ಕಾರದ 17 ಶಾಸಕರು ರಾಜೀನಾಮೆ ನೀಡಿದ್ದರಿಂದ ಮೈತ್ರಿ ಸರ್ಕಾರ ಅಲ್ಪ ಮತಕ್ಕೆ ಕುಸಿದು ಮತ್ತೆ ಬಿಜೆಪಿ ಸರ್ಕಾರ ರಚನೆ ಮಾಡಿತು. 2019ರಲ್ಲಿ ಯಡಿಯೂರಪ್ಪ ಮತ್ತೆ ನಾಲ್ಕನೇ ಬಾರಿ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು.
ಚುನಾವಣಾ ರಾಜಕೀಯದಲ್ಲಿ ಏಳುಗಳನ್ನೇ ಕಂಡಿರುವ ಯಡಿಯೂರಪ್ಪ ಅಧಿಕಾರ ಸಿಕ್ಕಾಗ ಆಡಳಿತ ನಡೆಸುವಾಗ ಕೇವಲ ಬೀಳುಗಳನ್ನೇ ಕಂಡಿದ್ದಾರೆ. ಸ್ವಪಕ್ಷೀಯರಿಂದಲೇ ಸಾಕಷ್ಟು ಅಡ್ಡಿ-ಆತಂಕಗಳನ್ನು ಎದುರಿಸಿದ್ದಾರೆ. ಮೊದಲ ಬಾರಿ ಪೂರ್ಣ ಪ್ರಮಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ರೆಸಾರ್ಟ್ ರಾಜಕಾರಣ, ರೆಡ್ಡಿ ಸಹೋದರರ ಕಾಟ, ಹೈಕಮಾಂಡ್ ಹಸ್ತಕ್ಷೇಪದಿಂದ ಯಡಿಯೂರಪ್ಪ ಆಡಳಿತ ನಡೆಸಲು ತೀವ್ರ ಹಿನ್ನಡೆ ಅನುಭವಿಸುವಂತಾಯಿತು. ಆಪ್ತರನ್ನು ಸಂಪುಟದಿಂದ ಕೈಬಿಡುವ ಸನ್ನಿವೇಶ ಎದುರಿಸಿ ಬಹಿರಂಗವಾಗಿಯೇ ಕಣ್ಣೀರು ಹಾಕಿದ್ದರು. 2019ರಲ್ಲಿ ಅಧಿಕಾರಕ್ಕೆ ಬಂದಾಗಲೂ ಆಡಳಿತ ನಡೆಸಲು ಹಿನ್ನಡೆ ಅನುಭವಿಸಿದ್ದೇ ಹೆಚ್ಚು. ಪದೇಪದೆ ನಾಯಕತ್ವ ಬದಲಾವಣೆ, ರೆಬೆಲ್ ಚಟುವಟಿಕೆಗಳೇ ಆಡಳಿತದಲ್ಲಿ ಸದ್ದು ಮಾಡಿದ್ದು ಯಡಿಯೂರಪ್ಪಗೆ ದೊಡ್ಡ ಹಿನ್ನಡೆ ತಂದಿದೆ.
ಪಕ್ಷ ಕಟ್ಟಿ ಸೋತ ನಾಯಕ : ಪ್ರಾದೇಶಿಕ ಪಕ್ಷವನ್ನು ಕಟ್ಟಿ ಸೋತವರ ಪಟ್ಟಿಗೆ ಯಡಿಯೂರಪ್ಪ ಕೂಡ ಸೇರ್ಪಡೆಯಾದರು. 2012ರಲ್ಲಿ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ಯಡಿಯೂರಪ್ಪ 2013ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಿ ಗಳಿಸಿದ್ದು ಕೇವಲ 6 ಸ್ಥಾನ. ರಾಜಕೀಯ ಮಹತ್ವಾಕಾಂಕ್ಷೆ ಹುಸಿಯಾಗಿ ತಮ್ಮ ತಂಡದೊಂದಿಗೆ ಬಿಜೆಪಿಗೆ ಮರಳಿದರು.
ಚುನಾವಣಾ ರಾಜಕಾರಣ,ಪಕ್ಷ ರಾಜಕಾರಣದಲ್ಲಿ ಗೆದ್ದು ಬೀಗಿರುವ ಯಡಿಯೂರಪ್ಪ ಆಡಳಿತ ನಿರ್ವಹಣೆಯಲ್ಲಿ ಮಾತ್ರ ಬರೀ ಬೀಳುಗಳನ್ನೇ ಕಂಡಿದ್ದಾರೆ. ಒಮ್ಮೆಯೂ ಅಧಿಕಾರ ಪೂರ್ಣಗೊಳಿಸುವ ಅವಕಾಶ ಪಡೆಯಲಿಲ್ಲ.