ಬೆಂಗಳೂರು : 'ಇಲ್ಲಿ ರಿಜ್ವಾನ್ ಅವರನ್ನು ಗೆಲ್ಲಿಸುತ್ತೇವೆ, ಅಲ್ಲಿ ಸುಮಲತಾ ಅವರನ್ನು ಗೆಲ್ಲಿಸಿಕೊಡಿ ಅಣ್ಣಾ,' ಎಂದು ಕೇಂದ್ರ ಲೋಕಸಭಾ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕಾರ್ಯಕರ್ತರಿಬ್ಬರು ಕೇಳಿದ್ದಾರೆ. ಆದ್ರೆ ಇದಕ್ಕೆ ಕಿವಿಗೊಡದೆ ಸಿದ್ದರಾಮಯ್ಯ ಭಾಷಣ ಮುಂದುವರೆಸಿದ್ದಾರೆ.
ರಾಜಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಪರ ಮತಯಾಚಿಸುವಾಗ ಮಾತನಾಡಿದ ಅವರು, ನನ್ನ ಅವಧಿಯಲ್ಲಿ ಬೆಂಗಳೂರು ಸಾಕಷ್ಟು ಅಭಿವೃದ್ಧಿ ಕಂಡಿದೆ. ಆದರೆ, ಬಿಜೆಪಿ ಅಭ್ಯರ್ಥಿ ಪಿ.ಸಿ. ಮೋಹನ್ ತಮ್ಮ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಹೀಗಾಗಿ, ಮೋದಿಗೆ ಮತ ನೀಡಿ ಎಂದು ಕೇಳುತ್ತಿದ್ದಾರೆ. ಹಾಗಾದರೆ ಕ್ಷೇತ್ರಕ್ಕೆ ಅವರ ಕೊಡುಗೆ ಏನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಶ್ರೀಮಂತರಿಗೆ ಅಚ್ಛೇ ದಿನ್ ಬಂದಿದೆ. ಬಡವರಿಗೆ ಇನ್ನೂ ಬಂದಿಲ್ಲ. ಉದ್ಯಮಿಗಳ ಮೂರು ಲಕ್ಷ ಕೋಟಿ ಸಾಲಮನ್ನಾ ಮಾಡಲಾಗಿದೆ. ಆದರೆ, ರೈತರ ಸಾಲ ಇನ್ನೂ ಮನ್ನಾ ಆಗಿಲ್ಲ. ಜೈಲಿಗೆ ಹೋದವರೆಲ್ಲಾ ಚೌಕಿದಾರ್ ಆಗಿದ್ದಾರೆ. ಯಡಿಯೂರಪ್ಪ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶ್ರೀರಾಮುಲು ಸೇರಿದಂತೆ ಬಿಜೆಪಿಯ ನಾಯಕರುಗಳೆಲ್ಲಾ ಈಗ ಚೌಕಿದಾರ್ ಎಂದು ಟೀಕಿಸಿದರು. ಅಲ್ಲದೆ ಮೋದಿ ಸುಳ್ಳುಗಾರ, ಸುಳ್ಳು ಹೇಳುವ ಪ್ರಧಾನಿ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.