ಬೆಂಗಳೂರು: ಮುಖ್ಯಮಂತ್ರಿಗಳ ವಸತಿ ಯೋಜನೆಯಡಿ ಮುಂದಿನ ತಿಂಗಳು ಒಂದು ಲಕ್ಷ ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಎರಡು ದಿನಗಳಿಂದ ವಸತಿ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಇಂದು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಸಚಿವರು, ಸೂರು ಇಲ್ಲದವರಿಗೆ ಸುರು ಕಲ್ಪಿಸಬೇಕೆಂಬುದು ನಮ್ಮ ಸರ್ಕಾರದ ಕನಸು. ಹಾಗಾಗಿ, ಫೆಬ್ರವರಿ 15 ರೊಳಗೆ ಮುಖ್ಯಮಂತ್ರಿ ವಸತಿ ಯೋಜನೆಯಡಿ ಒಂದು ಲಕ್ಷ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು. 5-6 ಲಕ್ಷ ರೂ. ಬದಲಿಗೆ 2-3 ಲಕ್ಷ ರೂ.ನಲ್ಲಿ ಮನೆ ನೀಡುವ ಬಗ್ಗೆ ಸಮಾಲೋಚನೆ ಮಾಡಲಾಗಿದೆ. G+3 ಮತ್ತು G+2 ಮನೆ ನಿರ್ಮಾಣ ಮಾಡುತ್ತೇವೆ ಎಂದರು.
ಈ ಯೋಜನೆಗಾಗಿ ಈಗಾಗಲೇ 332 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಮೊದಲ ಹಂತವಾಗಿ ಫೆಬ್ರವರಿಯಲ್ಲಿ 46 ಸಾವಿರ ಮನೆಗಳ ನಿರ್ಮಾಣ ಕಾರ್ಯ ಆರಂಭವಾಗಲಿದ್ದು, ಒಂದೂವರೆ ವರ್ಷದಲ್ಲಿ ಈ ಮನೆಗಳ ನಿರ್ಮಾಣ ಕಾರ್ಯ ಸಂಪೂರ್ಣವಾಗಲಿದೆ ಎಂದು ತಿಳಿಸಿದರು.
ಹೆಣ್ಣುಮಕ್ಕಳ ಹೆಸರಿಗೆ: ವಸತಿ ಯೋಜನೆಯಡಿ ನೀಡಲಾಗುವ ಎಲ್ಲ ಮನೆಗಳನ್ನು ಮನೆಯ ಹೆಣ್ಣು ಮಕ್ಕಳ ಹೆಸರಿಗೆ ನೋಂದಣಿ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಮನೆ ಬೇರೆ ಅವರಿಗೆ ಪರಭಾರೆ ಮಾಡುವುದು ತಪ್ಪುತ್ತದೆ ಎಂದು ಹೇಳಿದರು.
ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ 1.80 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಿದ್ದೇವೆ. ಈಗಾಗಲೇ 49 ಸಾವಿರ ಮನೆ ನಿರ್ಮಾಣಕ್ಕೆ ಟೆಂಡರ್ ಕರೆದಿದ್ದೇವೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಬ್ಬ ಗುತ್ತಿಗೆದಾರನಿಗೆ 500 ಮನೆ ಒಳಗೆ ನಿರ್ಮಾಣಕ್ಕೆ ಗುತ್ತಿಗೆ ನೀಡಲು ನಿರ್ಧರಿಸಲಾಗಿದೆ. ಉತ್ತಮ ಗುಣಮಟ್ಟ ಕಾಯ್ದುಕೊಳ್ಳುವ ಗುತ್ತಿಗೆದಾರರಿಗೆ ಮಾತ್ರ ಗುತ್ತಿಗೆ ನೀಡುತ್ತೇವೆ ಎಂದರು.
ಫಲಾನುಭವಿಗಳ ಆಯ್ಕೆಯೂ ಪಾರದರ್ಶಕವಾಗಿ ನಡೆಯುತ್ತದೆ. ಇದಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ ಎಂದ ಸಚಿವರು, ಸರ್ಕಾರದಿಂದ ಮನೆ ಪಡೆದು ಅದನ್ನು ಕೆಲವರು ಬಾಡಿಗೆಗೆ ನೀಡಿರುವ ದೂರುಗಳು ಬಂದಿವೆ. ಇದರ ತನಿಖೆಗೆ ಅಧಿಕಾರಿಗಳ ತಂಡ ರಚನೆ ಮಾಡಿದ್ದೇವೆ. ವರದಿ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬೆಂಗಳೂರು ನಗರದಲ್ಲಿ ಕೊಳಚೆ ಪ್ರದೇಶ ಮುಕ್ತ ಮಾಡುವ ಉದ್ದೇಶದಿಂದ ನಗರದಲ್ಲಿ 392 ಕೊಳಚೆ ಪ್ರದೇಶದ ಜನರಿಗೆ 50 ಸಾವಿರ ಮನೆ ನಿರ್ಮಾಣ ಮಾಡಲಾಗುವುದು. ರಾಜೀವ್ ಗಾಂಧಿ ವಸತಿ ಯೋಜನೆಯಡಿ 1 ಲಕ್ಷ ರೂ.ನಲ್ಲಿ ಮನೆ ನೀಡಲಾಗುತ್ತಿದ್ದು, ಈ ಒಂದು ಲಕ್ಷ ರೂ.ಗೂ ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗಿದೆ ಎಂದರು.