ದೊಡ್ಡಬಳ್ಳಾಪುರ: ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ ಮಾಜಿ ಸಿ.ಎಂ. ವೀರಪ್ಪ ಮೊಯ್ಲಿ ಇದು ಬಿಜೆಪಿ ಪಕ್ಷದ ರಾಕ್ಷಸ ಸಂಸ್ಕೃತಿಯನ್ನು ಸ್ಪಷ್ಟವಾಗಿ ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ವಿಧಾನಸಭಾ ಚುನಾವಣೆ ಕೆಲವೇ ತಿಂಗಳ ಇರುವ ಹಿನ್ನೆಲೆ ಶಾಸಕ ಟಿ.ವೆಂಕಟರಮಣಯ್ಯ ರಾಜಘಟ್ಟದ ಅಂಜನೇಯ ದೇವಸ್ಥಾನದಲ್ಲಿ ಪೂಜೆ ಮಾಡುವ ಮೂಲಕ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದರು. ಪ್ರಚಾರ ಕಾರ್ಯಕ್ರಮದಲ್ಲಿ ವೀರಪ್ಪ ಮೊಯ್ಲಿ ಸಹ ಭಾಗವಹಿಸಿದ್ದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು.
ಕಾಂಗ್ರೆಸ್ ಪಕ್ಷದ ಸಾಧನೆಗಳೊಂದಿಗೆ ಚುನಾವಣೆ ಎದುರಿಸುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ, ಸಣ್ಣ ಮತ್ತು ದೊಡ್ಡ ಕೈಗಾರಿಕೆಗಳನ್ನು ಕೊಟ್ಟಿದ್ದೇವೆ, ಮೆಡಿಕಲ್ ಮತ್ತು ಇಂಜಿನಿಯರಿಂಗ್ ಸೀಟ್ಗಳನ್ನು ಕೊಡುವ ಕಾರ್ಯಕ್ರಮvನ್ನು ನಾವು ಮಾಡಿದ್ದೇವೆ. ಗ್ಯಾಸ್ ಬೆಲೆ ಗಗನಕ್ಕೆ ಏರಿದರೂ 600 ರೂಪಾಯಿ ಸರ್ಕಾರದಿಂದ ಸಹಾಯಧನ ನೀಡುವ ಮೂಲಕ ಜನರಿಗೆ 300 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಕೊಟ್ಟಿದ್ದೆವು. ಇದು ನಮ್ಮ ಕಾಂಗ್ರೆಸ್ ಪಕ್ಷದ ಸಾಧನೆ ಎಂದು ಹೇಳಿದರು.
ಸಿ.ಟಿ.ರವಿ ಸಿದ್ದರಾಮಯ್ಯನವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದಿದ್ದರು. ಬಿಜೆಪಿ ಇದನ್ನ ಸಮರ್ಥಿಕೊಂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಅದು ಅವರ ಕೆಟ್ಟ ಸಂಸ್ಕೃತಿಯನ್ನ ತೋರಿಸುತ್ತದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: ಹೌದೋ ಹುಲಿಯಾ ರೀತಿ ಸಿದ್ರಾಮುಲ್ಲಾ ಖಾನ್ ಎಂಬುದು ಅವರಿಗೆ ಕೊಟ್ಟ ಬಿರುದು: ಸಿ ಟಿ ರವಿ