ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ವಾಟಾಳ್ ನಾಗರಾಜ್ ಎಂ ಜಿ ರಸ್ತೆಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಈಡುಗಾಯಿ ಒಡೆದು ಪ್ರತಿಭಟನೆ ನಡೆಸಿದರು.
ಇತ್ತ ಪ್ರತಿಭಟನೆ ಹಿನ್ನೆಲೆ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಪೊಲೀಸರನ್ನ ನಿಯೋಜಿಸಲಾಗಿತ್ತು. ಇದೇ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಮುಸ್ಲಿಂರನ್ನು ಹೊರಗಿಟ್ಟು ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದು ತಪ್ಪು, ಮಹಾತ್ಮ ಗಾಂಧಿ ಎಲ್ಲಾ ಜನಾಂಗದವರನ್ನು ಒಟ್ಟುಕೊಂಡೊಯ್ದವರು. ಹೀಗಾಗಿ ಇಂದು ಮಹಾತ್ಮ ಗಾಂಧಿ ಅವರ ಪ್ರತಿಮೆ ಬಳಿ ಬಂದು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದರು.
ಮಂಗಳೂರಿನಲ್ಲಿ ಇಬ್ಬರು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ನಾನು ಇಷ್ಟರಲ್ಲೇ ಮೃತಪಟ್ಟವರ ಮನೆಗೆ ಭೇಟಿ ನೀಡಲಿದ್ದೇನೆ. ಗೋಲಿಬಾರಿಗೆ ಮೃತಪಟ್ಟ ಇಬ್ಬರು ಕುಟುಂಬದವರಿಗೆ ತಲಾ 25 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು. ಗೋಲಿಬಾರ್ ಕುರಿತು ತನಿಖೆ ನಡೆಯಬೇಕು ಎಂದರು.
ಇತ್ತ ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಅವರ ಆರೋಗ್ಯ ಸುಧಾರಿಸಲಿ ಎಂದು ದೇವರಲ್ಲಿ ಬೇಡುತ್ತೇನೆ ಎಂದು ತಿಳಿಸಿದರು.