ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ವಿವಿಧ ನಾಯಕರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಬೆನ್ನು ನೋವಿನಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್ ಮನೆಯಲ್ಲೇ ಇದ್ದು ವಿಶ್ರಾಂತಿ ಪಡೆಯುತ್ತಿದ್ದಾರೆ. ಹೀಗಾಗಿ ಹಲವು ನಾಯಕರು ಮನೆಗೆ ಆಗಮಿಸಿ ಸಮಾಲೋಚನೆ ನಡೆಸಿ ತೆರಳಿದ್ದಾರೆ. ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಮಾಜಿ ಸಚಿವ ಆರ್.ವಿ.ದೇಶಪಾಂಡೆ, ಶಾಸಕಿ ಸೌಮ್ಯ ರೆಡ್ಡಿ ಮತ್ತತರ ನಾಯಕರು ಡಿಕೆಶಿ ನಿವಾಸಕ್ಕೆ ಭೇಟಿ ನೀಡಿದರು. ಬೆಳಿಗ್ಗೆ ರಾಮಲಿಂಗಾರೆಡ್ಡಿ ಭೇಟಿ ನೀಡಿ ತೆರಳಿದ್ದರು. ಇದರ ಬೆನ್ನಲ್ಲೇ ಸೌಮ್ಯ ರೆಡ್ಡಿ ಕೂಡ ಮಧ್ಯಾಹ್ನದ ನಂತರ ಆಗಮಿಸಿ ಡಿಕೆಶಿಯವರ ಆರೋಗ್ಯ ವಿಚಾರಿಸಿದ್ದಾರೆ.
ಇನ್ನು ಡಿಕೆಶಿ ಭೇಟಿಗೆ ಜೆಡಿಎಸ್ ನಾಯಕರು ಕೂಡ ಆಗಮಿಸಿದ್ದು, ಜೆಡಿಎಸ್ ನಾಯಕ ಹಾಗೂ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಮತ್ತು ಶಾಸಕ ಶಿವಲಿಂಗೇಗೌಡ ಭೇಟಿ ನೀಡಿ ಮಾತುಕತೆ ನಡೆಸಿದರು. ಪಕ್ಷಕ್ಕಿಂತ ಮುಖ್ಯವಾಗಿ ಒಕ್ಕಲಿಗ ಸಮುದಾಯದ ಹಿರಿಯ ನಾಯಕರಾಗಿರುವ ಕಾರಣ ಶಿವಕುಮಾರ್ರನ್ನು ವಿವಿಧ ಪಕ್ಷಗಳ ಒಕ್ಕಲಿಗ ಮುಖಂಡರು ಭೇಟಿ ಮಾಡಿದ್ದಾರೆ.
ನಾಳೆ ಡಿ.ಕೆ.ಸುರೇಶ್ ದಿಲ್ಲಿಗೆ: ಡಿಕೆಶಿ ತಾಯಿ ಹಾಗೂ ಪತ್ನಿ ವಿಚಾರಣೆ ಬೆಂಗಳೂರು ಹೈಕೋರ್ಟ್ನಲ್ಲಿ ನಡೆಸಲು ಅವಕಾಶ ನೀಡುವಂತೆ ಸಲ್ಲಿಸಿರುವ ಅರ್ಜಿ ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಈ ಸಂದರ್ಭ ಕುಟುಂಬ ಸಮೇತರಾಗಿ ಶಿವಕುಮಾರ್ ದೆಹಲಿಗೆ ತೆರಳಬೇಕಿತ್ತು. ಆದರೆ ಬೆನ್ನು ನೋವಿನ ಹಿನ್ನೆಲೆ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದು, ನಾಳೆ ಡಿಕೆಶಿ ಬದಲು ಡಿ.ಕೆ.ಸುರೇಶ್ ದಿಲ್ಲಿಗೆ ತೆರಳಿ ವಕೀಲರ ಜೊತೆ ನ್ಯಾಯಾಲಯದಲ್ಲಿ ಹಾಜರಾಗಿ ಶಿವಕುಮಾರ್ ಪರ ಮನವಿ ಮಾಡಲಿದ್ದಾರೆ. ದೆಹಲಿ ಹೈಕೋರ್ಟ್ ವಿಚಾರಣೆಯನ್ನು ಬೆಂಗಳೂರಿನಲ್ಲಿ ನಡೆಸಲು ಸಮ್ಮತಿಸಿದರೆ ವಿಚಾರಣೆ ಬೆಂಗಳೂರಿನಲ್ಲಿ ನಡೆಯಲಿದೆ. ಇಲ್ಲವಾದರೆ ಪತ್ನಿ ಹಾಗೂ ತಾಯಿಯೊಂದಿಗೆ ಡಿಕೆಶಿ ದೆಹಲಿಗೆ ತೆರಳುವ ಅನಿವಾರ್ಯತೆ ಎದುರಾಗಲಿದೆ.