ಬೆಂಗಳೂರು: ಕಾಂಗ್ರೆಸ್ ಪಕ್ಷದ ಬಹು ನಿರೀಕ್ಷೆಯ ಸಚಿವ ಸಂಪುಟ ವಿಸ್ತರಣೆ ಶನಿವಾರ ನಡೆಯಲಿದೆ. ಕಾಂಗ್ರೆಸ್ ಪಕ್ಷದ ಸಿಎಂ ಹಾಗೂ ಡಿಸಿಎಂ ಜೊತೆ 8 ಸಚಿವರು ಮೊದಲ ಹಂತದಲ್ಲಿ ಸಚಿವರಾಗಿ ಪದಗ್ರಹಣ ಮಾಡಿದ್ದರು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಎಂಟು ಸಚಿವರಿಗೆ ಪ್ರಮಾಣವಚನ ಬೋಧಿಸಿದ್ದರು. ಇದೀಗ ಕಾಂಗ್ರೆಸ್ ಸರ್ಕಾರದ 24 ಸಚಿವರಿಗೆ ರಾಜ್ಯಪಾಲರು ಶನಿವಾರ ಬೆಳಗ್ಗೆ 11:45ಕ್ಕೆ ಪ್ರಮಾಣವಚನ ಬೋಧಿಸಲಿದ್ದಾರೆ. ಪ್ರಮಾಣವಚನ ಬೋಧಿಸುವಂತೆ ರಾಜ್ಯ ಸರ್ಕಾರ ರಾಜ್ಯಪಾಲರಿಗೆ ಮಾಡಿದ್ದ ಮನವಿಯನ್ನು ಅವರು ಪುರಸ್ಕರಿಸಿದ್ದು ಸಮಾರಂಭಕ್ಕೆ ರಾಜಭವನದಲ್ಲಿ ಅವಕಾಶ ಕಲ್ಪಿಸಿದ್ದಾರೆ.
ಸಿಎಂ ಡಿಸಿಎಂ ಸೇರಿದಂತೆ ಒಟ್ಟು 34 ಸಚಿವ ಸ್ಥಾನಗಳ ಪೈಕಿ ಈಗಾಗಲೇ 10 ಸ್ಥಾನಗಳನ್ನ ಭರ್ತಿ ಮಾಡಲಾಗಿದೆ. ಉಳಿದ ಎಲ್ಲ 24 ಸ್ಥಾನಗಳ ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನಿಸಿದೆ. ರಾಜಭವನಕ್ಕೆ ನೂತನ ಸಚಿವರ ಪಟ್ಟಿ ರವಾನೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ರಾಜಭವನ ತಲುಪಿದ ಸಚಿವರ ಪಟ್ಟಿಯಲ್ಲಿ ಹೊಸದಾಗಿ ಸಂಪುಟ ಸೇರಲಿರುವ 24 ಭಾವಿ ಸಚಿವರ ಹೆಸರು ಒದಗಿಸಲಾಗಿದೆ.
ಸಂಪುಟ ಸೇರುವ ಅವಕಾಶ ವಂಚಿತರಾಗಿರುವ ಹಿರಿಯ ಕಾಂಗ್ರೆಸ್ ನಾಯಕರ ಆರ್ ವಿ ದೇಶಪಾಂಡೆ, ಬಿಕೆ ಹರಿಪ್ರಸಾದ್, ಟಿಬಿ ಜಯಚಂದ್ರ, ವಿನಯ್ ಕುಲಕರ್ಣಿ ಮತ್ತಿತರು ಬೇಸರಗೊಂಡಿದ್ದಾರೆ. ನಾಳೆ 24 ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾಳೆ ರಾಜಭವನದಲ್ಲಿ ಅದ್ಧೂರಿ ಪದಗ್ರಹಣ ಸಮಾರಂಭ ನಡೆಯಲಿದ್ದು, ಅದಕ್ಕೆ ಅಗತ್ಯ ಸಿದ್ಧತೆ ಆರಂಭವಾಗಿದೆ.
![ministers list](https://etvbharatimages.akamaized.net/etvbharat/prod-images/kn-bng-04-congress-cabnet-expansion-update-script-7208077_26052023221431_2605f_1685119471_288.jpg)
ಸಚಿವ ಸ್ಥಾನ ಪಡೆದವರು: ಸಚಿವರಾಗಿ ಲಿಂಗಾಯತ ಸಮುದಾಯದಿಂದ ಭಾಲ್ಕಿ ಶಾಸಕ ಈಶ್ವರ್ ಖಂಡ್ರೆ, ಬೆಳಗಾವಿ ಗ್ರಾಮಾಂತರ ಶಾಸಕ ಲಕ್ಷ್ಮಿ ಹೆಬ್ಬಾಳ್ಕರ್, ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್, ದಾವಣಗೆರೆ ಉತ್ತರ ಶಾಸಕ ಎಸ್ ಎಸ್ ಮಲ್ಲಿಕಾರ್ಜುನ್, ಸೇಡಂ ಶಾಸಕ ಶರಣಪ್ರಕಾಶ್ ಪಾಟೀಲ್, ಒಕ್ಕಲಿಗ ಸಮುದಾಯದ ಪಿರಿಯಾಪಟ್ಟಣ ಶಾಸಕ ವೆಂಕಟೇಶ್, ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ, ಚಿಂತಾಮಣಿ ಶಾಸಕ ಎಂಸಿ ಸುಧಾಕರ್, ನಾಗಮಂಗಲ ಶಾಸಕ ಚೆಲುವರಾಯಸ್ವಾಮಿ, ದಲಿತ ಸಮುದಾಯದ ಟಿ ನರಸೀಪುರ ಶಾಸಕ ಡಾ ಹೆಚ್ ಸಿ ಮಹದೇವಪ್ಪ, ಮುಧೋಳ ಶಾಸಕ ಆರ್ ಬಿ ತಿಮ್ಮಾಪುರ್, ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಮುಸ್ಲಿಂ ಸಮುದಾಯದ ಬೀದರ್ ಶಾಸಕ ರಹೀಮ್ ಖಾನ್, ನಾಮಧಾರಿ ರೆಡ್ಡಿ ಸಮುದಾಯಕ್ಕೆ ಸೇರಿದ ಗದಗ ಶಾಸಕ ಹೆಚ್ ಕೆ ಪಾಟೀಲ್ ನಾಳೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇನ್ನು ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್, ಕ್ಷತ್ರಿಯ ಸಮುದಾಯದ ಮುಖಂಡ ಹಾಗೂ ಎಐಸಿಸಿ ಕಾರ್ಯದರ್ಶಿ ಬೋಸ್ ರಾಜ್ (ವಿಧಾನಪರಿಷತ್ ಮಾಜಿ ಸದಸ್ಯರಾಗಿದ್ದು ಮತ್ತೊಮ್ಮೆ ವಿಧಾನಪರಿಷತ್ತಿಗೆ ಇವರನ್ನ ನೇಮಿಸಿ ಸಚಿವರನ್ನ ಮಾಡಲು ಕಾಂಗ್ರೆಸ್ ತೀರ್ಮಾನ), ಮೊಗೆರ ಸಮುದಾಯದ ಭಟ್ಕಳ ಶಾಸಕ ಮಂಕಾಳು ವೈದ್ಯ, ಬೋವಿ ಸಮುದಾಯದ ಕನಕಗಿರಿ ಶಾಸಕ ಶಿವರಾಜ್ ತಂಗಡಗಿ, ಮರಾಠ ಸಮುದಾಯದ ಕಲಘಟಗಿ ಶಾಸಕ ಸಂತೋಷ್ ಲಾಡ್, ಈಡಿಗ ಸಮುದಾಯದ ಸೊರಬ ಶಾಸಕ ಮಧು ಬಂಗಾರಪ್ಪ, ನಾಯಕ ಸಮುದಾಯದ ಮಧುಗಿರಿ ಶಾಸಕ ಕೆ ಎನ್ ರಾಜಣ್ಣ ಹಾಗೂ ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ, ಶರಣಬಸಪ್ಪ ದರ್ಶನಾಪುರ್, ಹೆಬ್ಬಾಳ ಶಾಸಕ ಭೈರತಿ ಸುರೇಶ್ ಸಚಿವರಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.