ಬೆಂಗಳೂರು: ಕೊರೊನಾ ಸೋಂಕಿತ ರೋಗಿಗಳಿಗೆ ಕಾನ್ವಾಲ್ಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ. ಇಂದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಮತ್ತು ಆರೋಗ್ಯ ಸಚಿವ ಶ್ರೀರಾಮುಲು ಚಾಲನೆ ನೀಡಿದರು.
ಇಂದಿನಿಂದ ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಪ್ರಯೋಗ ಆರಂಭವಾಗಿದ್ದು, ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಮೊದಲ ಪ್ಲಾಸ್ಮಾ ಥೆರಪಿ ಕ್ಲಿನಿಕಲ್ ಟ್ರಯಲ್ಗೆ ಚಾಲನೆ ನೀಡಲಾಗಿದೆ. ಕೊರೊನಾದಿಂದ ಗುಣಮುಖರಾದ ಇಬ್ಬರು ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ. ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರ(ಬಿಎಂಸಿಆರ್ಐ) ಹಾಗೂ ಹೆಚ್ಸಿಜಿ ಆಸ್ಪತ್ರೆ ಸಹಯೋಗದಲ್ಲಿ ವೆಂಟಿಲೇಟರ್ನಲ್ಲಿರುವ ಕೊರೊನಾ ರೋಗಿಗಳಿಗೆ ಪ್ಲಾಸ್ಮಾ ಥೆರಪಿ ಪ್ರಯೋಗ ನಡೆಯಲಿದೆ.
ಪ್ಲಾಸ್ಮಾ ವಿಂಗಡಣೆ ಒಂದು ಗಂಟೆಗಳ ಪ್ರಕ್ರಿಯೆಯಾಗಿದ್ದು, ಮೂರು ಗಂಟೆಗಳ ಸಮಯದಲ್ಲಿ ಪ್ಲಾಸ್ಮಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಡೋನರ್ಗಳ ರಕ್ತ ತೆಗೆದು ಅದರಲ್ಲಿರುವ ಪ್ಲಾಸ್ಮಾ ವಿಂಗಡಿಸಿ ನಂತರದ ರಕ್ತ ವಾಪಸ್ ಡೋನರ್ ದೇಹಕ್ಕೆ ರವಾನೆ ಮಾಡಲಾಗುತ್ತದೆ. ವಾರದಲ್ಲಿ ಎರಡು ಸಲ ಪ್ಲಾಸ್ಮಾ ದಾನ ಮಾಡಬಹುದು. ಪ್ಲಾಸ್ಮಾ ನೀಡಿದ ಬೆನ್ನಲ್ಲೇ ದೇಹದಲ್ಲಿ ಆ್ಯಂಟಿ ಬಾಡೀಸ್ ಉತ್ಪಾದನೆ ಆಗಲಿದೆ. ಈ ಹಿಂದೆ ಎಬೊಲಾ ಮತ್ತು ಹೆಚ್1ಎನ್1ಗೆ ಪ್ಲಾಸ್ಮಾ ಥೆರಪಿ ಬಳಸಲಾಗಿತ್ತು.
ಈ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು ಹಾಗೂ ಬೆಂಗಳೂರು ಮೆಡಿಕಲ್ ಕಾಲೇಜಿನ ಡಾ. ಸಿ.ಆರ್. ಜಯಂತಿ ಹಾಜರಿದ್ದರು.