ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣದ ಆರೋಪಿಗಳಾದ ನಟಿ ಸಂಜನಾ, ರಾಗಿಣಿ ಹಾಗೂ ಡಿ.ಜೆ ಹಳ್ಳಿ - ಕೆ.ಜಿ. ಹಳ್ಳಿ ಗಲಭೆ ಪ್ರಕರಣದ ಆರೋಪಿಗಳನ್ನು ಬಿಡುಗಡೆ ಮಾಡಬೇಕು ಎಂದು ಎನ್ಡಿಪಿಎಸ್ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ನಗರ ಪೊಲೀಸ್ ಆಯುಕ್ತ ಜಂಟಿ ಆಯುಕ್ತರಿಗೆ ಬೆದರಿಕೆ ಪತ್ರ ಕಳುಹಿಸಿದ್ದ ಆರೋಪಿಯನ್ನು ಕೇಂದ್ರ ವಿಭಾಗದ ಹಲಸೂರುಗೇಟ್ ಉಪವಿಭಾಗದ ಎಸಿಪಿ ನಜ್ಮಾ ಫಾರೂಕಿ ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಕೆಲ ರೋಚಕ ಮಾಹಿತಿಯನ್ನ ಬಾಯ್ಬಿಟ್ಟಿದ್ದಾನೆ.
ಬಂಧಿತ ಆರೋಪಿ ರಾಜಶೇಖರ್ ವಿಚಾರಣೆ ವೇಳೆ ಕೆಲ ರೋಚಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಮೊದಲು ಧ್ವಂದ ಹೇಳಿಕೆ ಕೊಡುತ್ತಿದ್ದ ಆರೋಪಿಯನ್ನು ಸ್ವತಃ ಎಸಿಪಿ ತಮ್ಮ ಖಾಕಿ ಆ್ಯಂಗಲ್ನಲ್ಲಿ ವಿಚಾರಣೆ ನಡೆಸಿದಾಗ ತಾನು ನಾಲ್ಕನೇ ತರಗತಿ ಓದಿದ್ದು, ಕೌಟುಂಬಿಕ ವಿಷಯಕ್ಕೆ ಸಂಬಂಧಿಸಿದಂತೆ ರಮೇಶ್ ಮೇಲಿನ ದ್ವೇಷದ ಕಾರಣ ಆತ ಜೀವನ ಪೂರ್ತಿ ಶಿಕ್ಷೆಯಾಗಿ ಜೈಲಿನಲ್ಲಿರಲು ಈ ರೀತಿ ಯೋಜನೆ ರೂಪಿಸಿದೆ ಎಂದಿದ್ದಾನೆ.
ಎರಡು ತಿಂಗಳಿನಿಂದ ಸ್ಕೆಚ್:
ಮೊದಲು ರಮೇಶ್ ಮೇಲೆ ಮಾಟ - ಮಂತ್ರ ಮಾಡಿ ಹೆದರಿಸಲು ನೋಡಿದ್ದ. ಆದರೆ, ರಮೇಶ್ ಅದ್ಯಾವುದಕ್ಕೂ ಬಗ್ಗದೇ ಇದ್ದಾಗ ಇಂತದ್ದೊಂದು ಕೃತ್ಯಕ್ಕೆ ಕೈಹಾಕಿದ್ದಾನೆ. ಆರೋಪಿ ಇತ್ತಿಚೆಗೆ ನಡೆಯುತ್ತಿರುವ ಪ್ರಮುಖ ಘಟನಾವಳಿಗಳಾದ ಡ್ರಗ್ಸ್ ಜಾಲ ಹಾಗೂ ಡಿಜೆ-ಕೆಜೆ ಹಳ್ಳಿ ಗಲಭೆ ಪ್ರಕರಣವನ್ನು ದಿನಪತ್ರಿಕೆ ಹಾಗೂ ವಿಶುವಲ್ ಮೀಡಿಯಾ ಹಾಗೂ ಕೆಲ ವೆಬ್ಸೈಟ್ನಲ್ಲಿ ಓದಿ ತಿಳಿದುಕೊಂಡಿದ್ದ. ಇದನ್ನೇ ಬಂಡವಾಳಗಿಟ್ಟುಕೊಂಡು ತುಮಕೂರು ಬಳಿಯ ಗುಡ್ಡೆ ಖ್ವಾರೆ ಬಳಿ ತೆರಳಿ ಅಲ್ಲಿ ಬಂಡೆಗೆ ಬಳಕೆ ಮಾಡುವ ಸ್ಫೋಟಕ ವಸ್ತುಗಳನ್ನ ಸಂಗ್ರಹ ಮಾಡಿ ಅದರ ಬಗ್ಗೆ ಇಂಚಿಚು ಮಾಹಿತಿ ಪಡೆದಿದ್ದ.
ಕವರ್ ಓಪನ್ ಮಾಡಿದಾಗ ಸ್ಫೋಟವಾಗಲು ಪ್ಲ್ಯಾನ್; ಪೊಲೀಸರ ಜಾಗೃತೆಯಿಂದ ಬಚಾವ್:
ಸ್ಫೋಟಕ ವಸ್ತುಗಳನ್ನು ಎನ್ಡಿಪಿಎಸ್ ನ್ಯಾಯಾಧೀಶರಿಗೆ ಕಳುಹಿಸಿದ್ದು, ಪತ್ರ ಓದಿ ಕವರ್ ಓಪನ್ ಮಾಡುವ ವೇಳೆ ಸ್ಫೋಟ ಸಂಭವ ಆಗುವ ರೀತಿ ಎಲ್ಲ ರೀತಿಯ ತಯಾರಿ ಮಾಡಿದ್ದ. ಪತ್ರ ಅಂಚೆ ಮೂಲಕ ರವಾನೆಯಾದ ಕಾರಣ ಎಲ್ಲಿಯೂ ಕೂಡ ಕವರ್ ಓಪನ್ ಆಗಬಾರದೆಂದು ಅದಕ್ಕೆ ಒದ್ದೆ ಕಾಟನ್ ಬಟ್ಟೆ ಸುತ್ತಿ, ತದ ನಂತರ ರವಾನೆ ಮಾಡಿದ್ದ. ಅದೃಷ್ಟವಶಾತ್ ನ್ಯಾಯಾಧೀಶರು ಪತ್ರ ಓದಿದ ತಕ್ಷಣ ಹಲಸೂರು ಗೇಟ್ ಪೊಲೀಸರನ್ನು ಕರೆಸಿದ್ದರು. ಪೊಲೀಸರು ಬಾಂಬ್ ನಿಷ್ಕ್ರಿಯ ತಂಡದ ಮುಖಾಂತರ ಕವರ್ ಓಪನ್ ಮಾಡಿಸಿ ದೊಡ್ಡ ಅನಾಹುತ ತಪ್ಪಿಸಿದ್ದರು.
ನಾಲ್ಕನೇ ಕ್ಲಾಸ್ ಓದಿದ ಕಾರಣ ಪತ್ರ ಬರೆಯಲು ಕೊಂಚ ತೊಡಕು:
ಇನ್ನು ಆರೋಪಿ ಬಂಧನವಾದ ತಕ್ಷಣ ತಾನು ಪತ್ರ ಬರೆದಿಲ್ಲಾ, ಬೇರೆಯವರ ಸಹಾಯ ಪಡೆದಿದ್ದೆ ಎಂದಿದ್ದ. ಆದರೆ, ತನಿಖೆ ವೇಳೆ ಆರೋಪಿಯೇ ಪತ್ರ ಬರೆದಿರುವ ವಿಚಾರ ಬಹಿರಂಗವಾಗಿದೆ. ನಾಲ್ಕನೇ ಕ್ಲಾಸ್ ಓದಿದ ಕಾರಣ ಅಕ್ಷರ ಬರೆಯಲು ಸರಿಯಾಗಿ ಬರುತ್ತಿರಲಿಲ್ಲ. ಎರಡು ತಿಂಗಳಿಂದ ಪತ್ರ ಬರೆಯಲು ಅಭ್ಯಾಸ ಮಾಡಿ ಮಾಡಿ ಹಾಳೆ ಹರಿದು ಬಿಸಾಕಿ ಕೊನೆಗೆ ತಪ್ಪುತಪ್ಪಾಗಿ ಒಂದು ಪತ್ರ ರೆಡಿ ಮಾಡಿ ತುಮಕೂರು ಅಂಚೆಯ ಮೂಲಕ ರಮೇಶ್ ಹೆಸರಿನ ವೋಟರ್ ಐಡಿ ಸಮೇತ ರವಾನೆ ಮಾಡಿದ್ದ.
ಆರೋಪಿಯನ್ನು ಖೆಡ್ಡಾಕೆ ಕೆಡವಿದ್ದೆ ರೋಚಕ:
ಇನ್ನು ಬೆದರಿಕೆ ಪತ್ರ ಸಂಬಂಧ ಖಾಕಿ ಸಂಪೂರ್ಣ ಅಲರ್ಟ್ ಆಗಿ ಶೋಧ ಕಾರ್ಯಾಚರಣೆ ಶುರು ಮಾಡಿದ್ದರು. ಇದೇ ವೇಳೆ, ಸಿಸಿಬಿ ಹಾಗೂ ಎಸಿಪಿ ನಜ್ಮಾ ಫಾರೂಕಿ ತಂಡ ರೆಡಿಯಾಗಿತ್ತು. ತುಮಕೂರು ಜಾಡು ಹಿಡಿದು ಹೊರಡಲು ಸಿದ್ಧರಾದಾಗ ಎಸಿಪಿ ನಜ್ಮಾ ಫಾರೂಕಿ ಪಕ್ಕಾ ಪ್ಲ್ಯಾನ್ ಮಾಡಿ ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡುತ್ತಿರುವ ತುಮಕೂರು ಮೂಲದವರ ತಂಡ ರಚನೆ ಮಾಡಿ ಮೊದಲು ವೋಟರ್ ಐಡಿಯಲ್ಲಿರುವ ರಮೇಶ್ ಅನ್ನು ಖೆಡ್ಡಾಕ್ಕೆ ಕೆಡವಿದ್ರು. ಆತನ ಮಾಹಿತಿಯಿಂದ ರಾಜಶೇಖರ್ ಎಂಬಾತನೇ ಪ್ರಮುಖ ಆರೋಪಿ ಎಂಬ ವಿಚಾರ ಗೊತ್ತಾಗಿದೆ.
ಸದ್ಯ ಪಕ್ಕಾ ಪ್ಲ್ಯಾನ್ ಮಾಡಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳ ಮಾಹಿತಿ ಪತ್ತೆ ಹಚ್ಚಿದ ಕೇಂದ್ರ ವಿಭಾಗದ ಎಸಿಪಿ ನಜ್ಮಾ ಫಾರೊಕಿ ತಂಡಕ್ಕೆ ನಗರ ಆಯುಕ್ತ ಕಮಲ್ ಪಂತ್ ಭೇಷ್ ಎಂದಿದ್ದಾರೆ.