ಆನೇಕಲ್: ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳು ಮನೆಯಲ್ಲಿದ್ದ ಒಂಟಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆನೇಕಲ್ ಉಪವಿಭಾಗದ ಸಿಂಗೇನ ಅಗ್ರಹಾರದಲ್ಲಿ ನಡೆದಿದೆ.
ಶ್ವೇತಾ ಹತ್ಯೆಗೊಳಗಾದ ಮಹಿಳೆಯಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ದುರ್ಘಟನೆ ನಡೆದಿದೆ. ಶ್ವೇತಾಳ ಗಂಡ ಚಂದಾಪುರದಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದು, ತಡವಾಗಿ ಮನೆಗೆ ಬಂದಿದ್ದರು ಎನ್ನಲಾಗ್ತಿದೆ.
ಮಗು ಮತ್ತು ಅತ್ತೆ ಊರಿಗೆ ತೆರಳಿದ್ದು, ಈ ವೇಳೆ ಕಳ್ಳರು ಮನೆಯೊಳಗೆ ನುಗ್ಗಿದ್ದಾರೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಕೊಲೆ ನಡೆದಿದೆ ಎಂದು ತಿಳಿದುಬಂದಿದೆ.
ಮಹಿಳೆಯ ಎದೆಯ ಭಾಗಕ್ಕೆ ಚಾಕುವಿನಿಂದ ಇರಿದು, ಚಿನ್ನದ ಸರ ಹಾಗು ಮನೆಯಲ್ಲಿನ ಬೆಲೆಬಾಳುವ ವಸ್ತುಗಳನ್ನು ದೋಚಿದ್ದಾರೆ. ಸ್ಥಳಕ್ಕೆ ಎಸ್ಪಿ ಭೇಟಿ ನೀಡಿದ್ದು, ಹೆಬ್ಬಗೋಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.