ಬೆಂಗಳೂರು: ಬಿಬಿಎಂಪಿ ಕ್ರೀಡಾ ಪಟುಗಳಿಗೆ ಇಂದು ವ್ಯಾಕ್ಸಿನ್ ವಿತರಣೆ ಮಾಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಬಿಬಿಎಂಪಿ ಹಾಗೂ ಒಲಂಪಿಕ್ ಸಂಸ್ಥೆ ಸಹಯೋಗದಲ್ಲಿ ಎರಡು ದಿನಗಳ ಕಾಲ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿರುವ ಉಚಿತ ಲಸಿಕಾಕರಣ ಕಾರ್ಯಕ್ರಮಕ್ಕೆ ಸಚಿವ ಕೆ.ಸಿ ನಾರಾಯಣಗೌಡ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಗೌರವ್ ಗುಪ್ತ, ಅನ್ಲಾಕ್ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ನಗರದಲ್ಲಿ ಕೋವಿಡ್ ನಿಯಂತ್ರಣಕ್ಕೆ ತರಲಾಗಿದೆ. ಆದರೆ ಲಾಕ್ಡೌನ್ ಸಡಿಲಿಕೆ ಮಾಡುವುದಾದರೆ ಹಂತಹಂತವಾಗಿ ಮಾಡಬೇಕಿದೆ. ಕೆಲವು ಚಟುವಟಿಕೆಗಳಿಗೆ ಮಾತ್ರ ಮೊದಲ ಹಂತದಲ್ಲಿ ಅನುಮತಿ ನೀಡಬೇಕಾಗುತ್ತದೆ ಎಂದರು.
ಖಾಸಗಿ ಬೆಡ್ ಮೀಸಲಾತಿ ಕಡಿಮೆ ಮಾಡಲು ಚಿಂತನೆ
ಖಾಸಗಿ ಆಸ್ಪತ್ರೆಗಳಿಂದ ಶೇ 50 ರಷ್ಟು ಅಂದರೆ 13 ಸಾವಿರ ಬೆಡ್ಗಳನ್ನು ಸರ್ಕಾರ ತೆಗೆದುಕೊಂಡಿತ್ತು. ಇದರಲ್ಲಿ ಕೆಲವು ಬೆಡ್ಗಳನ್ನು ಬಿಟ್ಟುಕೊಡುವ ಬಗ್ಗೆ ಚರ್ಚೆ ಆಗಿದೆ. ಸಾಮಾನ್ಯ ಬೆಡ್ಗಳಲ್ಲಿ ಶೇ 20 ರಷ್ಟು ಮಾತ್ರ ಉಳಿಸಿಕೊಳ್ಳುವ ಚಿಂತನೆ ಇದೆ. ಉಳಿದಂತೆ ಐಸಿಯು, ವೆಂಟಿಲೇಟರ್ಗಳ ಅಗತ್ಯ ಬೀಳುತ್ತದೆ. ಈ ಬಗ್ಗೆ ಇಂದು ಅಂತಿಮ ನಿರ್ಧಾರ ಆಗಲಿದೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ತೀರ್ಮಾನ ಆಗಲಿದೆ ಎಂದರು.
ಪ್ರತಿನಿತ್ಯ 70 ಸಾವಿರ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಹೊರಜಿಲ್ಲೆಗಳಿಂದ ಬರುವವರಿಗೆ ಟೆಸ್ಟಿಂಗ್ ಬಗ್ಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಆಗಬೇಕಿದೆ ಎಂದರು.