ಬೆಂಗಳೂರು: ಕೋವಿಡ್ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಲಾಕ್‌ಡೌನ್ ಮುಂದುವರಿಸುವಂತೆ ಶಿಫಾರಸು ಮಾಡಿದೆ. ಕೋವಿಡ್ ಪಾಸಿಟಿವಿಟಿ ಪ್ರಮಾಣ ಶೇ.5ಕ್ಕಿಂತ ಮತ್ತು ಮರಣ ಪ್ರಮಾಣ ಶೇ.1ಕ್ಕಿಂತ ಕಡಿಮೆ ಬರುವವರೆಗೆ ರಾಜ್ಯದಲ್ಲಿ ಲಾಕ್‌ಡೌನ್ ಮುಂದುವರಿಸಬೇಕು. ಈಗಿರುವ ಲಾಕ್‌ಡೌನ್ ನಲ್ಲಿನ ಕಠಿಣ ನಿಯಮವನ್ನೇ ಮುಂದುವರಿಸಬೇಕು ಎಂದು ತನ್ನ ವರದಿಯಲ್ಲಿ ತಿಳಿಸಿದೆ.
ಸೋಮವಾರ ಕೋವಿಡ್ ಪಾಸಿಟಿವ್ ಪ್ರಮಾಣ ಸೋಮವಾರ ಶೇ.13.57ರಷ್ಟು ಹಾಗೂ ಮರಣ ಪ್ರಮಾಣ ಶೇ.2.47 ಇದೆ. ಪ್ರತಿದಿನ ಈ ಪ್ರಮಾಣ ಇಳಿಕೆ ಕಾಣುತ್ತಿದೆ. ಆದರೆ ಜೂನ್ 7 ಕ್ಕೆ ಪಾಸಿಟಿವಿಟಿ ದರ ಶೇ.5 ಹಾಗೂ ಮರಣ ಪ್ರಮಾಣ ಶೇ.1ಕ್ಕಿಂತ ಇಳಿಕೆ ಕಾಣುವುದು ಅನುಮಾನವಾಗಿದೆ. ಹೀಗಾಗಿ ಕಠಿಣ ಲಾಕ್‌ಡೌನ್ ಮುಂದುವರಿಸಬೇಕು. ರಾಜ್ಯದಲ್ಲಿ ಸೋಂಕಿನ ಪ್ರಮಾಣ 5 ಸಾವಿರಕ್ಕೆ ಇಳಿಯುವರೆಗೆ ಕಠಿಣ ನಿಯಮಗಳನ್ನು ಮುಂದುವರಿಸಬೇಕು ಎಂದು ಸಲಹೆ ನೀಡಿದೆ.
ಕೇಂದ್ರ ಸರ್ಕಾರದ ಮಾರ್ಗಸೂಚಿ, ಕಳೆದ ಒಂದು ತಿಂಗಳ ಅವಧಿಯಲ್ಲಿ ರಾಜ್ಯದಲ್ಲಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳು, ದೃಢಪಡುವ ಪ್ರಮಾಣ, ಸಾವು ಪ್ರಮಾಣದ ಅಂಕಿಅಂಶಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಸಮಿತಿ ಈ ಶಿಫಾರಸು ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಸಮಿತಿ ವರದಿ ಯಥಾವತ್ ಜಾರಿ ಅನುಮಾನ:
ತಾಂತ್ರಿಕ ಸಲಹಾ ಸಮಿತಿಯ ಈ ಶಿಫಾರಸು ಯಥಾವತ್ ಅನುಷ್ಠಾನ ಅನುಮಾನ ಎನ್ನಲಾಗಿದೆ. ಪಾಸಿಟಿವಿಟಿ ದರ ಶೇ.5 ಹಾಗೂ ಮರಣ ಪ್ರಮಾಣ ಶೇ.1ಕ್ಕೆ ಇಳಿಕೆಯಾಗಲು ಇನ್ನೂ ಒಂದು ತಿಂಗಳು ಬೇಕಾಗಬಹುದು. ಅಲ್ಲಿವರೆಗೆ ಲಾಕ್‌ಡೌನ್ ಮಾಡಿದರೆ, ರಾಜ್ಯ ಸರ್ಕಾರ ದಿವಾಳಿಯಾಗುವ ಆತಂಕ ವ್ಯಕ್ತವಾಗಿದೆ.
ಆರ್ಥಿಕ ಇಲಾಖೆ ಹಾಗೂ ಕೆಲ ಹಿರಿಯ ಸಚಿವರು ಜೂನ್ 7ರ ಬಳಿಕ ಅನ್ಲಾಕ್ ಮಾಡುವ ಬಗ್ಗೆ ಸಲಹೆ ನೀಡಿದ್ದಾರೆ. ಪಾತಾಳಕ್ಕೆ ಇಳಿದಿರುವ ರಾಜ್ಯದ ಆರ್ಥಿಕತೆ ಚೇತರಿಕೆ ಕಾಣಲು ಇನ್ನು ಅನ್ಲಾಕ್ ಅನಿವಾರ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತ ಆರ್ಥಿಕ ಇಲಾಖೆ ಅಧಿಕಾರಿಗಳೂ ಲಾಕ್‌ಡೌನ್ ಮುಂದುವರಿಸುವ ವಿರುದ್ಧ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸಿಎಂ ಕೂಡ ಹಂತ ಹಂತವಾಗಿ ಅನ್ ಲಾಕ್ ಮಾಡುವ ಬಗ್ಗೆ ಒಲವು ಹೊಂದಿದ್ದಾರೆ. ಹೀಗಾಗಿ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದಂತೆ ಲಾಕ್‌ಡೌನ್ ಮುಂದುವರಿಸುವುದು ಅನುಮಾನ ಎಂದು ಮೂಲಗಳು ತಿಳಿಸಿವೆ.
ಜೂನ್ 5 ಅಥವಾ 6 ರಂದು ಈ ಸಂಬಂಧ ಸಚಿವರ ಜೊತೆ ಸಭೆ ನಡೆಸಿ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಸೇರಿ, ಕೋವಿಡ್ ಪ್ರಕರಣಗಳ ಸ್ಥಿತಿಗತಿ ಅವಲೋಕಿಸಿ ಸಿಎಂ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಜೂನ್ 15ರವರೆಗೆ ಲಾಕ್‌ಡೌನ್ ಮುಂದುವರಿಸುವ ಸಾಧ್ಯತೆ ಕೂಡ ಇದೆ. ಆದರೂ ಕೆಲ ಸಡಿಲಿಕೆ ಮಾಡಿ ಲಾಕ್‌ಡೌನ್ ಮುಂದುವರಿಸುವ ಸಾಧ್ಯತೆ ಹೆಚ್ಚಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ:ಜೂನ್ 7 ರ ಬಳಿಕ ಅನ್ ಲಾಕ್ ಆಗುತ್ತಾ..?: ಕರ್ತವ್ಯಕ್ಕೆ ಹಾಜರಾಗುವಂತೆ ಬಿಎಂಟಿಸಿ ಸಿಬ್ಬಂದಿಗೆ ಬುಲಾವ್..