ಬೆಂಗಳೂರು: ಈಜು ಕಲಿಯಲು ಬರುತ್ತಿದ್ದ ವಿದ್ಯಾರ್ಥಿ ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಸ್ವಿಮ್ಮಿಂಗ್ ಕೋಚ್ ಕೆ.ಪಿ. ಅಗ್ರಹಾರ ಪೊಲೀಸರ ಅತಿಥಿಯಾಗಿದ್ದಾನೆ.
ಕೆ.ಪಿ.ಅಗ್ರಹಾರದ ರೇಣುಕಾ ಪ್ರಸಾದ್ ಬಂಧಿತ ಆರೋಪಿ. ಬಂಧಿತನಿಂದ 20 ಲಕ್ಷ ರೂ. ಮೌಲ್ಯದ 506 ಗ್ರಾಂ ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಿಜಯನಗರದ ಈಜುಕೊಳವೊಂದರಲ್ಲಿ ತರಬೇತಿಗಾರನಾಗಿದ್ದ ರೇಣುಕಾ ಪ್ರಸಾದ್, ಸ್ವಿಮ್ಮಿಂಗ್ ಕಲಿಯಲು ಬರುತ್ತಿದ್ದ ವಿದ್ಯಾರ್ಥಿಯೊಡನೆ ಆತ್ಮೀಯತೆ ಬೆಳೆಸಿಕೊಂಡಿದ್ದ. ಇದೇ ಸೋಗಿನಲ್ಲಿ ಆತನ ಮನೆಯವನ್ನು ಪರಿಚಯಿಸಿಕೊಂಡು ಆಗಾಗ ಮನೆಗೆ ಹೋಗಿ ಬರುತ್ತಿದ್ದ.
ಈ ವೇಳೆ ಮನೆಯಲ್ಲಿರುವ ಚಿನ್ನಾಭರಣ ಕಳ್ಳತನ ಮಾಡಬೇಕೆಂದು ಸಂಚು ರೂಪಿಸಿ ಯಾರಿಗೂ ತಿಳಿಯದಂತೆ ಮನೆಯ ನಕಲಿ ಕೀ ಬಳಸಿ ಚಿನ್ನವನ್ನು ಎಗರಿಸಿದ್ದ. ಊರಿಗೆ ಹೋಗಿದ್ದ ಮನೆಯವರಿಗೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿರಲಿಲ್ಲ. ಕೆಲ ದಿನಗಳ ಬಳಿಕ ಚಿನ್ನ ನಾಪತ್ತೆಯಾಗಿರುವುದು ಗೊತ್ತಾಗಿದೆ. ಇದಾದ ನಂತರ ಸ್ವಿಮ್ಮಿಂಗ್ ಕೋಚ್, ವಿದ್ಯಾರ್ಥಿಯ ಮನೆಯಲ್ಲಿ ಮೊಬೈಲ್ ಕಳ್ಳತನ ಮಾಡಿದ್ದ. ಇದರಿಂದ ಅನುಮಾನಗೊಂಡ ವಿದ್ಯಾರ್ಥಿ ಮನೆಯವರು ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.