ಬೆಂಗಳೂರು: ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮತ್ತು ಸಹೋದರ ದೀಪಕ್ ಹತ್ಯೆಗೆ ಪ್ಲಾನ್ ಕೇಸ್ ಸಂಬಂಧ ಆರೋಪಿಗಳು ಸಿಕ್ಕಿ ಬೀಳುವ ಒಂದು ವಾರದ ಹಿಂದೆಯೇ ಹಣಕಾಸಿನ ವಿಚಾರಕ್ಕಾಗಿ ದೀಪಕ್ ಗೌಡನಿಗೆ ವಿಡಿಯೋ ಕಾಲ್ ಮಾಡಿ ಕುಖ್ಯಾತ ರೌಡಿ ಬಾಂಬೆ ರವಿ ಬೆದರಿಕೆ ಹಾಕಿದ್ದ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ. ಈ ಸಂಬಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದೆ.
ಬಾಂಬೆ ರವಿ ಸಹಚರ ಎನ್ನಲಾಗುವ ಮಂಜುನಾಥ್, ದೀಪಕ್ ಗೌಡನ ಮನೆಗೆ ಹೋಗಿ ಅಣ್ಣ ಮಾತನಾಡುತ್ತಾರೆ ಎಂದು ವಿಡಿಯೋ ಕಾಲ್ ಮಾಡಿ ಕೊಟ್ಟಿದ್ದ. ಮತ್ತೋರ್ವ ರೌಡಿ ಸೈಕಲ್ ರವಿ ಜೊತೆಗಿದ್ದರೂ ಅಷ್ಟೇ ಡೀಲ್ ಹಣ ನನಗೂ ಬರಬೇಕು, ಇಲ್ಲದಿದ್ದರೆ ಅಷ್ಟೇ ಎಂದು ಧಮಕಿ ಹಾಕಿದ್ದ ಎನ್ನಲಾಗಿದೆ. ಈ ಸಂಬಂಧ ದೀಪಕ್ ದೂರು ನೀಡಿರಲಿಲ್ಲ. ಮತ್ತೊಂದೆಡೆ ತಲೆಮರೆಸಿಕೊಂಡಿರುವ ರೌಡಿಗಳಾದ ಸೈಕಲ್ ರವಿ ಮತ್ತು ಸಹಚರ ಬೇಕರಿ ರಘುನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಓದಿ : ಎಕ್ಸ್ರೇ ಮಷಿನ್ನೂ ಇಲ್ಲ, ದುಡ್ಡೂ ಇಲ್ಲ; ವೈದ್ಯರಿಗೇ ಟೋಪಿ ಹಾಕಿದ ಖದೀಮರು
ಸುಪಾರಿ ನೀಡಿದ ಆರೋಪದಡಿ ಜಯನಗರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ರೌಡಿಶೀಟರ್ ಪಳನಿ ಗ್ಯಾಂಗ್ನ ಮಂಜುನಾಥ್ ಸೇರಿದಂತೆ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ನ್ಯಾಷನಲ್ ಕಾಲೇಜು ಬಳಿ ರಜತಾದ್ರಿ ಹೋಟೆಲ್ ಮುಂಭಾಗದ ರಸ್ತೆಯಲ್ಲಿ ಹೊಂಚು ಹಾಕಿದ್ದರು. ಟೆಂಪೋ ಟ್ರಾವೆಲರ್ ವಾಹನದಲ್ಲಿ ಮಾರಕಾಸ್ತ್ರ ತಂದಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಅಂದು ರಾತ್ರಿ 8 ಗಂಟೆಗೆ ಸಿನಿಮೀಯ ಶೈಲಿಯಲ್ಲಿ ದಾಳಿ ಮಾಡಿದ್ದ ಜಯನಗರ ಪೊಲೀಸರು ದಾಳಿ ಮಾಡಿ ಅರೆಸ್ಟ್ ಮಾಡಿದ್ದರು. ಹಣಕಾಸಿನ ವ್ಯವಹಾರದ ಹಿನ್ನೆಲೆ ಕೊಲೆಗೆ ಪ್ಲಾನ್ ಶಂಕೆ ವ್ಯಕ್ತಪಡಿಸಿ ಪೊಲೀಸರು ತನಿಖೆ ಕೈಗೊಂಡಿದ್ದರು. ಸದ್ಯ ಜಯನಗರ ಮತ್ತು ಬನಶಂಕರಿ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿವೆ.