ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಸಜಾಬಂಧಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾಗ ವಿ.ಕೆ. ಶಶಿಕಲಾ ನಟರಾಜನ್ ಗೆ ವಿಶೇಷ ಸೌಲಭ್ಯ ನೀಡಲು ಜೈಲು ಅಧಿಕಾರಿಗಳು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಇನ್ನೊಂದು ತಿಂಗಳಲ್ಲಿ ಸಲ್ಲಿಸಬೇಕೆಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಹೈಕೋರ್ಟ್ ಸೂಚಿಸಿದೆ.ನಿಗದಿತ ಅವಧಿಯೊಳಗೆ ವರದಿ ಸಲ್ಲಿಸದಿದ್ದರೆ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ತಾಕೀತು ಮಾಡಿದೆ.
ಪ್ರಕರಣದ ತನಿಖೆಯನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿ ತಮಿಳುನಾಡಿನ ಶಿಕ್ಷಣ ತಜ್ಞೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಕೆ.ಎಸ್. ಗೀತಾ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಸೂಚನೆ ನೀಡಿತು.ಇದಕ್ಕೂ ಮುಂಚೆ ಎಸಿಬಿ ಪರ ವಕೀಲರು ಹಾಜರಾಗಿ, ಪ್ರಕರಣದ ತನಿಖೆಯ ಅಂತಿಮ ವರದಿ ಸಲ್ಲಿಸಲು ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಿದರು. ಇದನ್ನು ಆಕ್ಷೇಪಿಸಿದ ಅರ್ಜಿದಾರ ಪರ ವಕೀಲರು, ತನಿಖಾ ವರದಿ ಸಲ್ಲಿಸಲು ಈಗಾಗಲೇ ನ್ಯಾಯಾಲಯ ಸಾಕಷ್ಟು ಸಮಯ ನೀಡಿದೆ. ಇದೀಗ ಮತ್ತೆ ಸಮಯ ಕೇಳುತ್ತಿರುವುದು ಸರಿಯಲ್ಲ. ಪ್ರಕರಣ ಸಂಬಂಧ ಈಗಾಗಲೇ ಹಿರಿಯ ಐಎಎಸ್ ಅಧಿಕಾರಿ ವಿನಯ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಿ 295 ಪುಟಗಳ ಮಧ್ಯಂತರ ವರದಿ ಸಲ್ಲಿಸಲಾಗಿದೆ. ಎಸಿಬಿ ನಾಮಕವಸ್ತೆಯ ತನಿಖೆ ನಡೆಸುತ್ತಾ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿದರು.
ಎಸಿಬಿಯ ಮನವಿಯನ್ನು ಆಕ್ಷೇಪಿಸಿದ ನ್ಯಾಯಪೀಠ, ತನಿಖೆಯ ಅಂತಿಮ ವರದಿ ಸಲ್ಲಿಸಲು ಹೈಕೋರ್ಟ್ ಈಗಾಗಲೇ ಸಾಕಷ್ಟು ಸಮಯ ನೀಡಿದೆ. ಇದೀಗ ಮತ್ತೆ ಮೂರು ತಿಂಗಳ ಕಾಲಾವಕಾಶ ಕೇಳುತ್ತಿದ್ದು, ಅದನ್ನು ಒಪ್ಪಲಾಗದು ಎಂದು ತಿಳಿಸಿತು.
ಎಸಿಬಿ ಪರ ಉತ್ತರಿಸಿ, ಪ್ರಕರಣದಲ್ಲಿ ನಾಲ್ವರು ಆರೋಪಿಗಳಿದ್ದಾರೆ. ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಪೂರ್ವಾನುಮತಿ ಕೋರಿ ಸಕ್ಷಮ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಆದರೆ, ಇನ್ನೂ ಪೂರ್ವಾನುಮತಿ ನೀಡಿಲ್ಲ. ಬದಲಾಗಿ ಕೆಲವೊಂದು ಸ್ಪಷ್ಟನೆ ಕೇಳಲಾಗಿದೆ. ಅವುಗಳಿಗೆ ಉತ್ತರಿಸಬೇಕಿದೆ ಹಾಗೂ ಮತ್ತಷ್ಟು ತನಿಖೆ ನಡೆಸಬೇಕಿದೆ. ಪೂರ್ವಾನುಮತಿ ದೊರೆತ ಕೂಡಲೇ ಅಂತಿಮ ವರದಿ ಸಲ್ಲಿಸಲಾಗುವುದು. ಈ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸುವುದಕ್ಕಾಗಿ ಮೂರು ತಿಂಗಳ ಕಾಲಾವಕಾಶ ನೀಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಅದನ್ನು ಆಕ್ಷೇಪಿಸಿದ ನ್ಯಾಯಪೀಠ, ಸಕ್ಷಮ ಪ್ರಾಧಿಕಾರವು ಪೂರ್ವಾನುಮತಿ ಒಂದೆರಡು ದಿನದಲ್ಲಿ ನೀಡಬಹುದು. ಅದಕ್ಕಾಗಿ ತಿಂಗಳಾನುಗಟ್ಟಲೆ ಸಮಯ ಏಕೆ ಬೇಕು ಎಂಬುದೇ ನ್ಯಾಯಾಲಯಕ್ಕೆ ಅರ್ಥವಾಗುತ್ತಿಲ್ಲ. ಸಕ್ಷಮ ಪ್ರಾಧಿಕಾರದ ಅಧಿಕಾರಿಯು ಯಾರು? ಎಂದು ಪ್ರಶ್ನಿಸಿತಲ್ಲದೆ, ಗರಿಷ್ಠ ಒಂದು ತಿಂಗಳ ಕಾಲಾವಕಾಶ ನೀಡಲಾಗುತ್ತದೆಯಷ್ಟೆ ಎಂದು ಕಟುವಾಗಿ ನುಡಿಯಿತು.
ನಂತರ ಮೂರು ತಿಂಗಳ ಕಾಲಾವಕಾಶ ನೀಡಲು ನಿರಾಕರಿಸಿದ ನ್ಯಾಯಪೀಠ, ಒಂದು ತಿಂಗಳಲ್ಲಿ ಎಸಿಬಿಯು ಪ್ರಕರಣದ ಅಂತಿಮ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು. ತಪ್ಪಿದರೆ ಗೃಹ ಇಲಾಖೆ ಕಾರ್ಯದರ್ಶಿ ಅರ್ಜಿ ಕುರಿತು ಹೈಕೋರ್ಟ್‌ನ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಅ.6ಕ್ಕೆ ಮುಂದೂಡಿತು.