ಬೆಂಗಳೂರು: ಅಧಿಕಾರಕ್ಕಾಗಿ ಬಿಜೆಪಿಯವರು ಏನೇನೋ ಮಾಡಿದರು. ಈಗ ನಮ್ಮ ಕೈಯಲ್ಲಿ ಆಗಲ್ಲ ಎಂದು ಹೇಳುತ್ತಿದ್ದಾರೆ. ದೇವರೇ ಕಾಪಾಡಬೇಕು ಎಂದಿರುವ ಆರೋಗ್ಯ ಸಚಿವ ಶ್ರೀರಾಮುಲು ಹೇಳಿಕೆ ಎಲ್ಲೆಲ್ಲಿಗೋ ಹೋಗುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ದೇವರೇ ಕಾಪಾಡಬೇಕೆಂಬ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪರಿಸ್ಥಿತಿ ನಿಭಾಯಿಸಲು ಆಗದಿದ್ದರೆ ಅಧಿಕಾರದಲ್ಲಿ ಏಕಿರಬೇಕು. ಈ ಕ್ಷಣವೇ ರಾಜೀನಾಮೆ ನೀಡಿ. ರಾಜ್ಯಪಾಲರ ಆಳ್ವಿಕೆ ಜಾರಿಗೆ ಬರಲಿ. ಅವರು ಆಡಳಿತ ನಡೆಸುತ್ತಾರೆ. ಈ ಸಂದರ್ಭದಲ್ಲಿ ನಾವು ರಾಜಕಾರಣ ಮಾಡಲಿಲ್ಲ. ಸಂಪೂರ್ಣ ಸಹಕಾರ ನೀಡಿದ್ದೆವು. ಆದರೂ ಪರಿಸ್ಥಿತಿ ನಿಭಾಯಿಸಲು ಆಗಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಪ್ರತಿಪಕ್ಷವಾಗಿ ನಾವು ಅನಿವಾರ್ಯವಾಗಿ ಮಾತನಾಡುವಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಶ್ರೀರಾಮುಲು ಹೇಳಿಕೆ ಈಗ ಇಡೀ ರಾಜ್ಯವನ್ನೇ ತಲ್ಲಣಗೊಳಿಸುತ್ತಿದೆ. ಇದು ಕೇವಲ ಶ್ರೀರಾಮುಲು ಹೇಳಿಕೆಯಲ್ಲ, ಇದು ಸರ್ಕಾರದ ಮಾತಾಗಿದೆ. ಸರ್ಕಾರ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ. ಜನರನ್ನು ರಕ್ಷಿಸುವ ಜವಾಬ್ದಾರಿಯನ್ನು ನಿಮಗೆ ನೀಡಲಾಗಿದೆ. ಅದನ್ನು ನಿಭಾಯಿಸಲು ನಿಮಗೆ ಸಾಧ್ಯವಿಲ್ಲ ಎಂದಾದರೆ ಇಡೀ ಸರ್ಕಾರ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಆಗ್ರಹಿಸಿದರು.