ಬೆಂಗಳೂರು: ಶುಕ್ರವಾರ ಸಂಜೆಯಷ್ಟೇ ಇಬ್ಬರು ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದೇಶ ಹೊರಡಿಸಿದ್ದ ಸರ್ಕಾರ ರಾತ್ರಿಯಾಗುತ್ತಿದ್ದಂತೆ ದಿಢೀರ್ ಎಂದು ವರ್ಗಾವಣೆ ರದ್ದುಗೊಳಿಸಿದೆ.
ಬೆಂಗಳೂರು ನಗರ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಬಿ.ಆರ್.ರವಿಕಾಂತೇಗೌಡ ಅವರನ್ನು ನಗರ ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಹಾಗೂ ಇದೇ ಸ್ಥಾನದಲ್ಲಿದ್ದ ಉಮೇಶ್ ಕುಮಾರ್ ಅವರನ್ನು ಅಗ್ನಿಶಾಮಕ ಇಲಾಖೆಗೆ ಐಜಿಪಿಯನ್ನಾಗಿ ಸಂಜೆ ವರ್ಗಾವಣೆ ಮಾಡಲಾಗಿತ್ತು. ರಾತ್ರಿಯಾಗುತ್ತಿದ್ದಂತೆ ವರ್ಗಾವಣೆ ಆದೇಶ ಪರಿಷ್ಕೃತಗೊಳಿಸಿದ ಸರ್ಕಾರ ರವಿಕಾಂತೇಗೌಡ ಅವರನ್ನು ಅಗ್ನಿಶಾಮಕ ಇಲಾಖೆಯ ಐಜಿಪಿ ಆದೇಶವನ್ನು ರದ್ದುಗೊಳಿಸಿ ಡಿಜಿ ಹಾಗೂ ಐಜಿಪಿ ಕಚೇರಿಯಲ್ಲಿ ವರದಿ ಮಾಡಿಕೊಳ್ಳಲು ಆದೇಶಿಸಿದೆ. ಅದೇ ರೀತಿ ಐಜಿಪಿಯಾಗಿ ಉಮೇಶ್ ಕುಮಾರ್ ಅವರನ್ನು ಅದೇ ಜಾಗದಲ್ಲಿ ಮುಂದುವರೆಸಿದೆ.
ಈ ಬೆಳವಣಿಗೆ ಬೆನ್ನಲ್ಲೇ ಕಮ್ಯೂನಿಕೇಷನ್ ಹಾಗೂ ಲಾಜೆಸ್ಟಿಕ್ ಇಲಾಖೆಯ ಎಡಿಜಿಪಿಯಾಗಿ ಡಾ. ರಾಜ್‌ವೀರ್ ಪ್ರತಾಪ್ ಶರ್ಮಾ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಎಡಿಜಿಪಿಯಾಗಿ ಮಾಲಿನಿ ಕೃಷ್ಣಮೂರ್ತಿ ಅವರನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.